ಮಂಗಳೂರು , ಫೆ.15 (DaijiworldNews/PY): ಕೇಂದ್ರ ಸರ್ಕಾರವು ದಿಢೀರನೆ ಅಡುಗೆ ಅನಿಲ ದರ ಏರಿಸಿರುವುದನ್ನು ಖಂಡಿಸಿ, ಕೇಂದ್ರದ ದಲಿತ ವಿರೋಧಿ ನೀತಿ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳೂರು ತಾಪಂ ಕಟ್ಟಡದ ಎದುರ ಶನಿವಾರ ರಸ್ತೆಯಲ್ಲಿ ಒಲೆ ಹಾಕಿ ಕಾಫಿ ತಯಾರಿಸಿ ಕುಡಿದು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್ ಅವರು, ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ. ದೇಶದಲ್ಲಿ ಜನಸಾಮಾನ್ಯರು ಬದುಕುವಂತಹ ವಾತಾವರಣವಿಲ್ಲ. ಯುವಕರು ತತ್ತರಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ ಎಂದರು.
ದೇಶದಲ್ಲಿ ಕೇಂದ್ರದ ನೀತಿ, ಕಾಯ್ದೆ, ಪ್ರಧಾನಿ, ಮಂತ್ರಿಗಳನ್ನು ಕೇಳುವಂತಿಲ್ಲ. ಪ್ರಶ್ನಿಸಿದರೆ ದೇಶದ್ರೋಹದ ಆರೋಪ ಹೊರಿಸುತ್ತಾರೆ. ದೇಶದಲ್ಲಿ ಅರಾಜಕತೆ ಪ್ರಾರಂಭವಾಗಿದೆ. ದೇಶದ ಜನರ ಭಾವನೆಗಳನ್ನು ಕೇಂದ್ರ ಸರ್ಕಾರವು ಕೆರಳಿಸುತ್ತಿದೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನ್ಯಾಯ ದೊರಕಿಲ್ಲ. ತನಿಖೆ ಹೇಗೆ ನಡೆದಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಕ್ಕೆ ಅವರನ್ನು ಭಯೋತ್ಪಾಧಕರ ರೀತಿಯಲ್ಲಿ ನೋಡುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಕಡಬದಲ್ಲಿ ನಡೆದ ಕಾರು ಅಪಘಾತ ಪ್ರಕರಣದಲ್ಲಿ ಮಹಿಳೆ ಸಾವನ್ನಪ್ಪಿದ್ದರು, ಅಪಘಾತಕ್ಕೆ ಕಾರಣವಾದ ಕಾರಿನ ಬಗ್ಗೆ ವಿಚಾರಣೆ ನಡೆಸಲು ಆರು ತಿಂಗಳು ಕಳೆದರೂ ಮಾಹಿತಿ ದೊರಕಿರಲಿಲ್ಲ. ಈಗ ಆರೋಪಿ ಯಾರೆಂದು ತಿಳಿದಿದೆ. ಆ ಕಾರು ಪುತ್ತೂರಿನ ಬಿಜೆಪಿ ಮುಖಂಡನದ್ದೇ ಆಗಿತ್ತು. ಆತ ಕಾನೂನನ್ನು ಗೌರವಿಸಬೇಕಾಗಿತ್ತು. ಬಿಜೆಪಿಯವರು ಮಹಿಳೆಯರನ್ನು ಎಷ್ಟು ಗೌರವಿಸುತ್ತಾರೆ ಎಂದು ಇದರಿಂದಲೇ ತಿಳಿಯುತ್ತದೆ. ರಾಜ್ಯ ಸಚಿವರೊಬ್ಬರ ಪುತ್ರ ನಡೆಸಿದ ಅಪಘಾತದಲ್ಲೂ ಅಮಾಯಕರು ಮೃತಪಟ್ಟಿದ್ದಾರೆ. ಆದರೆ, ಪ್ರಕರಣ ಮರೆಮಾಚುತ್ತಿರುವುದು ನೋವಿನ ಸಂಗತಿ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಇತ್ತೀಚೆಗೆ ಅಡುಗೆ ಅನಿಲ ಸಬ್ಸಿಡಿಯನ್ನು ದೇಶದ ಎಲ್ಲ ಜನತೆಯೂ ತ್ಯಾಗ ಮಾಡಿದ್ದಾರೆ. ಅಡುಗೆ ಅನಿಲ ದರವನ್ನು ದಿಢೀರನೇ 145 ರೂ. ಏರಿಕೆ ಮಾಡಿರುವುದು ಬಿಜೆಪಿಯ ಇತಿಹಾಸದಲ್ಲಿ ಮಾತ್ರ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅಧಿಕಾರದಿಂದ ಜನಸಾಮಾನ್ಯರು ಸಂಕಷ್ಟಪಡುತ್ತಿದ್ದಾರೆ. ಇದು ಬಿಜೆಪಿ ಆಡಳಿತದ ಕಾರ್ಯವೈಖರಿಯನ್ನು ತಿಳಿಸುತ್ತದೆ ಎಂದರು.
ಬಿಜೆಪಿ ನೇತೃತ್ವದ ಸರ್ಕಾರ ಬಂದ ಬಳಿಕ ನಿರುದ್ಯೋಗಿಗಳ ಸಂಖ್ಯೆ ಅಧಿಕವಾಗಿದೆ. ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರದ ಆಡಳಿತ ಇದ್ದ ಸಂದರ್ಭ ವಿಶ್ವವೇ ಆರ್ಥಿಕ ಮುಗ್ಗಟ್ಟಿನಿಂದ ಕುಸಿಯುತ್ತಿದ್ದಿದ್ದರೆ, ದೇಶದಲ್ಲಿ ಯಾವುದೇ ಬ್ಯಾಂಕ್ ದಿವಾಳಿಯಾಗಿರಲಿಲ್ಲ. ಎಲ್ಲಾ ಸಮಸ್ಯೆಗಳಿಗೆ ಬಿಜೆಪಿಯೇ ಕಾರಣ ಎಂದು ಹೇಳಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಪೆಟ್ರೋಲ್, ಡೀಸೆಲ್ ದರ ದಿನೇದಿನೆ ಏರಿಕೆ ಆಗುತ್ತಿದೆ. ಇದರಿಂದ ದಿನಬಳಕೆ ವಸ್ತುಗಳ ದರವೂ ಏರಿಕೆಯಾಗುತ್ತಿದೆ. ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಇದೆ. ದೇಶದ ಖಜಾನೆ ಖಾಲಿಯಾಗಿದೆ. ರೈತರ ಬೆಳೆ ದರ ದ್ವಿಗುಣಗೊಳಿಸುವುದಾಗಿ ಕೇಂದ್ರ ಸರಕಾರವು ಭರವಸೆ ನೀಡಿತ್ತು. ರೈತರು, ಬಡವರು, ದೀನ-ದಲಿತರನ್ನು ಕೇಂದ್ರ ನಿರ್ಲಕ್ಷಿಸುತ್ತಿದೆ. ಬಿಜೆಪಿ ವೈಫಲ್ಯದಿಂದಾಗಿ ಜನತೆ ತತ್ತರಿಸಿದ್ದಾರೆ ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂದಿದ್ದರು. ದುರ್ಬಲರ ಮೇಲೆ ನೇರ ಗುರಿ ಇಟ್ಟುಕೊಂಡಿದ್ದರು. ಕೇಂದ್ರ ಸರಕಾರವು ಏನೇ ಮಾಡಿದರೂ ಆಗುತ್ತದೆ ಎಂಬ ಅಹಂನಲ್ಲಿದೆ. ಅಂಬೇಡ್ಕರ್ ಅವರ ಆಶಯವನ್ನು ಪರೋಕ್ಷವಾಗಿ ವಿರೋಧಿಸುತ್ತಿದ್ದರು. ಆದರೆ ಇಂದು ನೇರವಾಗಿ ಸಂವಿಧಾನ ವಿರೋಧಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಶಂಸುದ್ದೀನ್ ಕುದ್ರೋಳಿ, ಲ್ಯಾನ್ಸಿ ಪಿಂಟೊ, ಹಿಲ್ಡಾ ಆಳ್ವ, ಅದ್ದು ಕೃಷ್ಣಾಪುರ, ಯು.ಟಿ. ತೌಸೀಫ್ ಪುತ್ತೂರು, ಅಪ್ಪಿ, ನಮಿತಾ ಡಿ. ರಾವ್, ಎನ್.ಎಸ್.ಕರೀಂ, ಮಲ್ಲಿಕಾ, ಸುರೇಖಾ ಚಂದ್ರಹಾಸ, ನಿರಜ್ಪಾಲ್, ಗೀತಾ ಪ್ರವೀಣ್, ನಾಗೇಂದ್ರಕುಮಾರ್, ಸುರೇಶ್ ಬಳ್ಳಾಲ್, ಬೇಬಿ ಕುಂದರ್, ಅಬ್ಬಾಸ್ ಅಲಿ, ಶಾಲೆಟ್ ಪಿಂಟೊ, ಪದ್ಮನಾಭ ನರಿಂಗಾನ, ಯು.ಎಚ್. ಖಾಲೀದ್, ಸುದೀಪ್ಕುಮಾರ್ ಶೆಟ್ಟಿ, ವಿಶ್ವಾಸ್ ದಾಸ್, ಧನಂಜಯ ಮಟ್ಟು, ಶಾಹುಲ್ ಹಮೀದ್, ಜೆಸಿಂತಾ ಆಲ್ಫ್ರೆಡ್ ಮತ್ತಿತರರು ಉಪಸ್ಥಿತರಿದ್ದರು.