ಕಾಸರಗೋಡು, ಜ 15 (DaijiworldNews/SM): ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಸ್ಕೂಲ್ ಶಿಕ್ಷಕನಿಗೆ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹದಿನೈದು ವರ್ಷ ಸಜೆ ಮತ್ತು ೩೫ ಸಾವಿರ ರೂ. ದಂಡ ವಿಧಿಸಿ ತೀರ್ಫು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಎರಡು ವರ್ಷ ಅಧಿಕ ಶಿಕ್ಷೆ ನೀಡಿ ನ್ಯಾಯಾಲಯ ಆದೇಶಿಸಿದೆ. ನೀರ್ಚಾಲು ಮಲ್ಲಡ್ಕದ ಬಾಲಮುರಳಿ ಶಿಕ್ಷೆಗೊಳಗಾದ ಶಿಕ್ಷಕನಾಗಿದ್ದಾನೆ. ಸಂತ್ರಸ್ತ ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರ ಮೂಲಕ ಸರಕಾರ ಸಹಾಯ ಧನ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ.
೨೦೧೨ ರಿಂದ ೨೦೧೪ ರ ತನಕ ದ ಅವಧಿಯಲ್ಲಿ ಮೂರನೇ ತರಗತಿಯ ಆರು ವಿದ್ಯಾರ್ಥಿನಿಯರಿಗೆ ಈತ ಲೈಂಗಿಕ ಕಿರುಕುಳ ನೀಡಿದ್ದಾಗಿ ಪೋಕ್ಸೋ ಪ್ರಕರಣ ಕಾಸರಗೋಡು ನಗರ ಠಾಣೆಯಲ್ಲಿ ದಾಖಲಾಗಿತ್ತು. ಕಿರುಕುಳಕ್ಕೆ ಒಳಗಾದ ಓರ್ವ ವಿದ್ಯಾರ್ಥಿನಿ ಸಹಪಾಠಿಗೆ ವಿಷಯ ತಿಳಿಸಿದ ಹಿನ್ನಲೆಯಲ್ಲಿ ಕೃತ್ಯ ಹೊರಬಂದಿತ್ತು. ಬಳಿಕ ಮನೆಯವರಿಗೆ ಮಾಹಿತಿ ನೀಡಲಾಯಿತು. ಪೋಷಕರು ಚೈಲ್ಡ್ ಲೈನ್ ಗೆ ದೂರು ನೀಡಿದ್ದು, ಮಾಹಿತಿ ಕಲೆ ಹಾಕಿದ ಬಳಿಕ ಶಿಕ್ಷಕನ ವಿರುದ್ಧ ಕಾಸರಗೋಡು ನಗರ ಠಾಣೆಯಲ್ಲಿ ದೂರು ನೀಡಲಾಗಿತ್ತು. ನ್ಯಾಯಾಲಯಕ್ಕೆ ೨೬ ಸಾಕ್ಷಿಗಳನ್ನು ಹಾಗೂ ೩೨ದಾಖಲೆಗಳನ್ನು ಹಾಜರುಪಡಿಸಲಾಗಿತ್ತು.