ಕಾರ್ಕಳ, ಜ 15 (DaijiworldNews/SM): ಚಾಲಕನ ನಿರ್ಲಕ್ಷ್ಯಕ್ಕೆ ಬಸ್ಸು ಬಂಡೆಗಲ್ಲಿಗೆ ಬಡಿದು ಪರಿಣಾಮ ಬಸ್ ನಲ್ಲಿದ್ದ 9 ಮಂದಿ ಸಾವನ್ನಪ್ಪಿದ ಘಟನೆ ಕಾರ್ಕಳ ಮಾಳ ಮುಳ್ಳೂರು ಘಾಟಿನಲ್ಲಿ ಶನಿವಾರ ಸಾಯಂಕಾಲ ಸಂಭವಿಸಿದೆ.
ಮೈಸೂರಿನ ವೈಟಲ್ ರೆಕಾಡ್ಸ್ ಕಂಪೆನಿಯ ಸಿಬ್ಬಂದಿಗಳಾದ ಅನಜ್ಞಾ (21), ರಂಜಿತಾ ಪಿ, ಯೋಗೆಂದ್ರ (21), ರಾಧಾ ರವಿ(22), ಪ್ರೀತಂ ಗೌಡ, ಶಾರೋಲ್ (21) ಹಾಗೂ ಅಡುಗೆ ಸಹಾಯಕ ಬಸವರಾಜ್ (22) ಸೇರಿ ಒಟ್ಟು ಒಂಭತ್ತು ಮಂದಿ ಸಾವನ್ನಪ್ಪಿದ್ದರೆ ಇನ್ನು ಮಣಿಪಾಲ ಕೆ ಎಂಸಿ ಆಸ್ಪತ್ರೆಯಲ್ಲಿ 5 ಮಂದಿ ಹಾಗೂ ನಗರ ಖಾಸಗಿ ಆಸ್ಪತ್ರೆಯಲ್ಲಿ ಓರ್ವ ದಾಖಲಾಗಿದ್ದು ಆತನ ಸ್ಥಿತಿಯೂ ಗಂಭೀರವಾಗಿದೆ.
ಬಸ್ಸಿನಲ್ಲಿ ಒಟ್ಟು 35 ಮಂದಿ ಪ್ರಯಾಣಿಸುತ್ತಿದ್ದು ಮೈಸೂರಿನಿಂದ ಕಳಸ ಮಾರ್ಗವಾಗಿ ಮಣಿಪಾಲಕ್ಕೆ ಪ್ರಯಾಣ ಬೆಳೆಸುತ್ತಿರುವುದಾಗಿ ತಿಳಿದು ಬಂದಿದೆ. ಈ ಮೊದಲು ವಾಹನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಕಳಸದ ಗ್ಯಾರೇಜ್ ನಲ್ಲಿ ದುರಸ್ತಿ ಕಾರ್ಯನಡೆಸಿ ಬಳಿಕ ಪ್ರಯಾಣ ಮುಂದುವರೆಸಲಾಗಿರುವ ಬಗ್ಗೆ ಗಾಯಾಳು ಪ್ರಾಯಣಿಕರು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್, ಹಾಗೂ ತಾಲೂಕು ದಂಡಾಧಿಕಾರಿ ಪುರಂದರ ಹೆಗ್ಡೆ ಆಸ್ಪತ್ರೆಗೆ ಬೇಟಿ ನೀಡಿದ್ದಾರೆ.
ಗಂಭೀರ ಗಾಯಗೊಂಡ ಗಾಯಾಳುಗಳನ್ನು ಸರಕಾರಿ ಆಸ್ಪತ್ರೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಸ್ಥಳೀಯ ವೈದ್ಯರು ತುರ್ತು ಚಿಕಿತ್ಸೆ ನೀಡುವ ಮೂಲಕ ಸ್ಪಂದಿಸಿದ್ದಾರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಾರ್ವಜನಿಕರು ಗಾಯಗಳನ್ನು ಆಸ್ಪತ್ರೆ ಕರೆ ತರುವಲ್ಲಿ ಸಹಕರಿಸಿದ್ದಾರೆ.