ಕುಂದಾಪುರ, ಫೆ 16 (Daijiworld News/MB) : ಕಂಟೈನರ್ ಒಂದರಲ್ಲಿ ಬೆಂಗಾವಲು ವಾಹನದ ಭದ್ರತೆಯೊಂದಿಗೆ ಅಕ್ರಮವಾಗಿ 16 ಜಾನುವಾರುಗಳನ್ನು ಸಾಗಿಸುತ್ತಿದ್ದ ಘಟನೆ ಶನಿವಾರ ಮುಂಜಾನೆ ಸಾಯಿಬ್ರಕಟ್ಟೆ ಚೆಕ್ಪೋಸ್ಟ್ ಬಳಿ ನಡೆದಿದೆ. ಪೊಲೀಸರಿಂದ ದಾಳಿ ನಡೆದ ಸಂದರ್ಭ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ಅಬ್ದುಲ್ ರವೂಫ್, ಇಮ್ತಿಯಾಜ್ ಲಾಲ್ಖಾನ್, ದಾದು ಹಾಗೂ ತಬ್ರೇಜ್ ಬೆಪ್ಪಾಯಿ ಎಂದು ಗುರುತಿಸಲಾಗಿದೆ.
ಶನಿವಾರ ಬೆಳಿಗ್ಗೆ ಶಿವಮೊಗ್ಗ ಕಡೆಯಿಂದ ಬ್ರಹ್ಮಾವರ ಕಡೆಗೆ ಸಾಯಿಬ್ರಕಟ್ಟೆ ರಸ್ತೆಯಲ್ಲಿ ಕಂಟೇನರ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ತುಂಬಿಕೊಂಡು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕೋಟ ಸಬ್ ಇನ್ಸ್ಪೆಕ್ಟರ್ ನಿತ್ಯಾನಂದ ಗೌಡ ಹಾಗೂ ಸಿಬ್ಬಂದಿಗಳು ಮುಂಜಾನೆ 5 ಗಂಟೆಯ ಸುಮಾರಿಗೆ ತಪಾಸಣೆ ನಡೆಸುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂದರ್ಭ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಕಂಟೇನರ್ ಲಾರಿಯೊಂದು ಶಿರಿಯಾರ ಕಡೆಯಿಂದ ಸಾಯಿಬ್ರಕಟ್ಟೆ ಕಡೆಗೆ ಬಂದಿದ್ದು ನಿಲ್ಲಿಸುವಂತೆ ಸೂಚಿಸಿದರೂ ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಲು ಯತ್ನಿಸಿದಾಗ ಬ್ಯಾರಿಕೇಡ್ ಅಡ್ಡ ಇಟ್ಟು ಲಾರಿಯನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಚಾಲಕ ಮೀನಿನ ಲೋಡ್ ಇರುವುದಾಗಿ ತಿಳಿಸಿದ್ದ ಎನ್ನಲಾಗಿದೆ.
ಇದೇ ಸಂದರ್ಭ ಲಾರಿಯ ಹಿಂದುಗಡೆಯಿಂದ ಬಂದ ಬಿಳಿ ಬಣ್ಣದ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕನು ಕಾರನ್ನು ನಿಲ್ಲಿಸಿ, ಅಬ್ದುಲ್ ರವೂಫ್ ಎಂಬಾತ ಇಳಿದಿದ್ದು ತನನ್ನು ವಿಚಾರಿಸುತ್ತಿರುವಾಗ ಕಾರಿನಲ್ಲಿದ್ದ ಇಬ್ಬರು ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾರೆ. ಕಾರಿನಲ್ಲಿ ಪರಾರಿಯಾದವರ ಬಗ್ಗೆ ವಿಚಾರಿಸಿದಾಗ ಬಾಬು ಮತ್ತು ಆತನ ಸ್ನೇಹಿತ ಜಾನುವಾರು ತುಂಬಿದ ಕಂಟೇನರ್ ಲಾರಿಗೆ ಬೆಂಗಾವಲಾಗಿ ಬಂದಿರುವುದಾಗಿ ತಿಳಿದು ಬಂದಿದೆ.
ಬಳಿಕ ಕಂಟೇನರ್ ಲಾರಿಯ ಹಿಂದಿನ ಬಾಗಿಲನ್ನು ತೆಗೆದು ನೋಡಿದಲ್ಲಿ ಒಟ್ಟು ಹದಿನಾರು ಎತ್ತುಗಳನ್ನು ಹಿಂಸಾತ್ಮಕ ರೀತಿಯಲ್ಲಿ ನೈಲಾನ್ ರೋಪ್ ಸಹಾಯದಿಂದ ಕುತ್ತಿಗೆಗೆ ಕಟ್ಟಲಾಗಿತ್ತು ಎನ್ನಲಾಗಿದ್ದು, ಜಾನುವಾರುಗಳನ್ನು ಬಾಬು ಎಂಬವರು ಸೂಚಿಸಿದಂತೆ ಬೆಳಗಾವಿಯ ಬಾಗೇವಾಡಿಯಿಂದ ಲೋಡ್ ಮಾಡಿಕೊಂಡು ದಾವಣಗೆರೆಯಾಗಿ ಕೇರಳದ ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಲಾರಿಯ ಕಂಟೇನರನಲ್ಲಿ ಹದಿನಾಲ್ಕು ಬಿಳಿ ಬಣ್ಣದ ಎತ್ತುಗಳಿದ್ದು ಅವುಗಳ ಒಟ್ಟು ಮೌಲ್ಯ ಸುಮಾರು ಐದೂರೆ ಲಕ್ಷ ರೂಪಾಯಿಗಳಾಗಿದ್ದು, ಎಂಬತ್ತು ಸಾವಿರ ಮಲ್ಯದ ಎರಡು ಕಪ್ಪು ಎತ್ತುಗಳಿದ್ದವು. ಎಂಟು ಲಕ್ಷ ರೂಪಾಯಿ ಮೌಲ್ಯದ ಕಂಟೇನರ್, ನಾಲ್ಕು ಮೊಬೈಲ್ ಫೋನ್ಗಳು, ಹನ್ನೊಂದು ಸಾವಿರದ ಏಳುನೂರು ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.