ಉಳ್ಳಾಲ, ಫೆ 16 (Daijiworld News/MB) : ರಾಷ್ಟ್ರೀಯ ಹೆದ್ದಾರಿ 66 ರ ನೇತ್ರಾವತಿ ಸೇತುವೆ ಬಳಿ ತಂದೆ ಹಾಗೂ ಆರು ವರ್ಷದ ಪುತ್ರ ನಾಪತ್ತೆಯಾಗಿರುವ ಘಟನೆ ಭಾನುವಾರ ಬೆಳಗ್ಗಿನ ಜಾವ ನಡೆದಿದೆ ಎಂದು ವರದಿಯಾಗಿದೆ.
ನಾಪತ್ತೆಯಾದವರನ್ನು ಮೂಲತಃ ಬಂಟ್ವಾಳ ಬಾಳ್ತಿಲ ನಿವಾಸಿಗಳಾದ ಗೋಪಾಲಕೃಷ್ಣ (45) ಹಾಗೂ ನಮೀಶ್ ರೈ (6) ಎಂದು ಎನ್ನಲಾಗಿದೆ.
ಪ್ರಸ್ತುತ ಗೋಪಾಲಕೃಷ್ಣ ಅವರು ಮುಂಬೈನಲ್ಲಿ ನೆಲೆಸಿದ್ದು ಎರಡು ದಿನಗಳ ಹಿಂದೆ ಕೊಣಾಜೆಯ ಪಾವೂರಿನಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ನಡೆಯುವ ನೇಮೋತ್ಸವಕ್ಕೆ ಪತ್ನಿ ಹಾಗೂ ಪುತ್ರನೊಂದಿಗೆ ಆಗಮಿಸಿದ್ದಾರೆ ಎಂದು ಹೇಳಲಾಗಿದೆ.
ಆದರೆ ಗೋಪಾಲಕೃಷ್ಣ ಅವರು ಪುತ್ರ ನಮೀಶ್ ಜೊತೆಯಲ್ಲಿ ಕಳೆದ ರಾತ್ರಿ ಸುಮಾರು 4:30 ಗಂಟೆಗೆ ಮನೆಯಿಂದ ಕಾರಿನಲ್ಲಿ ಹೊರಟ್ಟಿದ್ದು ಇಂದು ಬೆಳಿಗ್ಗಿನ ಜಾವ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಅವರ ಕಾರು ಪತ್ತೆಯಾಗಿದೆ.
ಈ ಕಾರು ಮಹಾರಾಷ್ಟ್ರ ನೋಂದಣಿಯದ್ದಾಗಿದ್ದು ಅದರಲ್ಲಿ ಯಾರೂ ಇಲ್ಲದನ್ನೂ ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಗಮನಿಸಿದಾಗ ಈ ಪ್ರಕರಣ ತಿಳಿದು ಬಂದಿದೆ.
ಹಾಗೆಯೇ ಕಾರಿನಲ್ಲಿ ಡೆತ್ನೋಟ್ ಪತ್ತೆಯಾಗಿದೆ ಎಂದು ಹೇಳಲಾಗಿದ್ದು ಇಬ್ಬರು ನೇತ್ರವಾತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಉಂಟಾಗಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿದ್ದು ಶೋಧ ಕಾರ್ಯಚರಣೆ ಮುಂದುವರೆದಿದೆ.