ಮಂಗಳೂರು, ಫೆ 08 : ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷವೂ ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲಿದೆ ಎಂದು ಎಎಪಿಯ ದಕ್ಷಿಣ ಕನ್ನಡ ಜಿಲ್ಲೆಯ ಸಂಚಾಲಕರಾದ ರಾಜೇಂದ್ರ ಕುಮಾರ್ ಹೇಳಿದ್ದಾರೆ. ರಾಷ್ಟ್ರೀಯ ಪಕ್ಷಗಳ ರಾಷ್ಟ್ರ ವಿಭಾಗಿಸುವ ನೀತಿಗಳನ್ನು ನೋಡಿ ಜನ ಬೇಸತ್ತಿದ್ದಾರೆ. ಭ್ರಷ್ಟಾಚಾರ ವ್ಯವಸ್ಥೆ ತಾಂಡವವಾಡುತ್ತಿದ್ದು, ಜನರು ಹತಾಶರಾಗಿದ್ದಾರೆ. ಎಲ್ಲಾ ಸರ್ಕಾರಿ ಯೋಜನೆಗಳಲ್ಲಿ ಅಸ್ಪಷ್ಟತೆ ಮತ್ತು ಕಳಪೆ ಮಟ್ಟದ ಕೆಲಸಗಳಿಂದಾಗಿ ಜನಸಾಮಾನ್ಯರಿಗೆ ಸರಕಾರದ ಮೇಲಿನ ಭರವಸೆ ಇಲ್ಲವಾಗಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರದರ್ಶಿತ ಆಡಳಿತ ಮತ್ತು ಶಿಕ್ಷಣ ಹಾಗು ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳು ದಕ್ಷಿಣ ಕನ್ನಡದ ಸಾರ್ವಜನಿಕರು ಮನಗಂಡಿದ್ದಾರೆ. ಇವತ್ತಿನ ರಾಜಕೀಯ ವ್ಯವಸ್ಥೆಯ ಪರ್ಯಾಯ ಅಂದರೆ ಆಪ್ ಪಕ್ಷ ಎಂಬ ಒಂದು ಸಂಚಲನವು ಜನತೆಯಲ್ಲಿ ಇದೆ ಹೀಗಾಗಿ ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರಗಳಿಗೆ ಆಪ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎಂದು ಸಂಚಾಲಕರಾದ ರಾಜೇಂದ್ರ ಕುಮಾರ್ ಅವರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.