ಉಡುಪಿ, ಫೆ 16 (Daijiworld News/MB) : ಹಣಕ್ಕಾಗಿ ದ್ವೇಷದಿಂದ ಸ್ನೇಹಿತನನ್ನು ಬಾವಿಗೆ ನೂಕಿ ಹತ್ಯೆಗೈದ ಘಟನೆ ಮಂದಾರ್ತಿ ಸಮೀಪದ ಹೆಗ್ಗುಂಜೆ ಗ್ರಾಮದ ಪಡುಕೋಮೆ ನಿರ್ಜೆಡ್ಡು ಎಂಬಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸುನಿಲ್ ಶೆಟ್ಟಿ (21) ಎಂಬಾತನು ಎರಡು ವರ್ಷಗಳ ಹಿಂದೆ ಮೃತ ವ್ಯಕ್ತಿ ನಿರ್ಜೆಂಡ್ಡುವಿನ ಮನೋಜ್ (21) ಪಡೆದುಕೊಂಡಿದ್ದ ಹಣವನ್ನು ಹಿಂದಕ್ಕೆ ನೀಡುವಂತೆ ಹೇಳಿದ್ದನು.
ಹಾಗೆಯೇ ಆರೋಪಿಯನ್ನು ಪೊಲೀಸರು ಬಂಧನ ಮಾಡಿ, ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗೆ ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು ಆರೋಪಿ ಹತ್ಯೆ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
2 ವರ್ಷಗಳ ಹಿಂದೆ ಮನೋಜ್ ಸುನಿಲ್ನಿಂದ 2,500 ರೂಪಾಯಿ ಹಣ ಪಡೆದಿದ್ದು ಅದನ್ನು ವಾಪಾಸ್ ಮಾಡಿರಲಿಲ್ಲ. ಫೋನ್ ಮಾಡಿದರೂ ಉತ್ತರಿಸುವುದಿಲ್ಲ ಎಂಬ ಕಾರಣಕ್ಕಾಗಿ ಮನೆಯವರಲ್ಲಿ ಸುನಿಲ್ ಗಲಾಟೆ ಮಾಡಿದ್ದನು.
ಈ ಸಂದರ್ಭದಲ್ಲಿ ಮನೆಯೊಳಗೆ ಮಲಗಿದ್ದ ಮನೋಜ್ ಹೊರಗೆ ಬಂದು ಹಣ ನೀಡುವುದಾಗಿ ಹೇಳಿದರೂ ಸುನಿಲ್ ಶೆಟ್ಟಿ ಈ ಕೂಡಲೇ ಹಣ ನೀಡಬೇಖು ಎಂದು ಪಟ್ಟುಹಿಡಿದನು. ಮನೋಜ್ ಹಲ್ಲು ಉಜ್ಜಲೆಂದು ಬಾವಿ ಕಟ್ಟೆಗೆ ಹೋದ ಸಂದರ್ಭದಲ್ಲಿ ಸುನಿಲ್ ಶೆಟ್ಟಿ ಕೂಡಾ ಅಲ್ಲಿಗೆ ಹೋಗಿದ್ದು ಸ್ವಲ್ಪ ಹೊತ್ತಿನಲ್ಲೇ ಸುನಿಲ್ ಶೆಟ್ಟಿ ಮನೋಜ್ ತಾಯಿ ರಾಧಾಬಾಯಿಗೆ ನಿಮ್ಮ ಪುತ್ರ ಬಾವಿಗೆ ಬಿದ್ದಿದ್ದಾನೆ ಎಂದು ಹೇಳಿ ಅಲ್ಲಿಂದ ಓಡಿ ಹೋಗಿದ್ದನು.
ಬಾಕಿಯಿರುವ ಹಣ ನೀಡದ ಹಿನ್ನಲೆಯಲ್ಲಿ ದ್ವೇಷದಿಂದ ಸುನಿಲ್ ಶೆಟ್ಟಿ ನನ್ನ ಪುತ್ರನನ್ನು ಬಾವಿಗೆ ದೂಡಿ ಹತ್ಯೆ ಮಾಡಿದ್ದಾನೆ ಎಂದು ಮೃತನ ತಾಯಿ ರಾಧಾಬಾಯಿ ದೂರಿದ್ದರು.
ಈ ಕುರಿತಂತೆ ಬ್ರಹ್ಮಾವರ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿದೆ.