ಬೈಂದೂರು, ಫೆ.16 (DaijiworldNews/PY): ಬೈಂದೂರು ತಾಲೂಕಿನ ಮರವಂತೆಯಲ್ಲಿ ಭೂಕುಸಿತದಲ್ಲಿ ಭಾನುವಾರ ಕೊಳವೆ ಬಾವಿಯೊಳಗೆ ಸಿಲುಕಿದ್ದ ವ್ಯಕ್ತಿಯನ್ನು 6 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಯಿತು.
ವ್ಯಕ್ತಿಯನ್ನು ಉಪ್ಪುಂದ ಫಿಶರೀಸ್ ಜನತಾ ಕಾಲೋನಿ ನಿವಾಸಿ ಸುಬ್ಬಾ ಖಾರ್ವಿಯ ಮಗ ರೋಹಿತ್ ಎಂದು ಗುರುತಿಸಲಾಗಿದೆ.
ಕೊಳವೆಬಾವಿ ಕೊರೆಯುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಅದರ ಸುತ್ತ ಭಾರೀ ಆಳಕ್ಕೆ ಭೂಕುಸಿತ ಉಂಟಾಗಿದ್ದು, ಈ ಸಂದರ್ಭ ಸುಮಾರು 15 ಅಡಿಯಷ್ಟು ಮಣ್ಣು ಕುಸಿದಿದ್ದು, ಸ್ಥಳದಲ್ಲಿದ್ದ ರೋಹಿತ್ ಖಾರ್ವಿ ಅದರಲ್ಲಿ ಸಿಲುಕಿಕೊಂಡಿದ್ದರು.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ವೈದ್ಯರು ಆಗಮಿಸಿ ರೋಹಿತ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ರೋಹಿತ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತು.