ಮಂಗಳೂರು, ಫೆ 17 (Daijiworld News/MB) : ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದ ಅಗ್ರ ಕೋಚ್ಗಳಿಂದ ಟ್ರಯಲ್ಸ್ (ಸಾಮರ್ಥ್ಯ ಪರೀಕ್ಷೆ)ಗೆ ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರನ್ನು ಆಹ್ವಾನಿಸುವುದಾಗಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ ಒಂದು ದಿನಗಳ ಬಳಿಕ ಶ್ರೀನಿವಾಸ ಗೌಡ, ತನಗೆ ಆ ಬಗ್ಗೆ ಆಸಕ್ತಿ ಇಲ್ಲ ಹಾಗೂ ತಾನು ಕಂಬಳದಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಸೂರ್ಯ-ಚಂದ್ರ ಕಂಬಳ ನಡೆಯುತ್ತಿರುವ ವೇಣೂರು ಪೆರ್ಮುದೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾನು ಕಂಬಳದ ಕಾರಣದಿಂದಾಗಿ ಖ್ಯಾತಿ ಗಳಿಸಿರುವುದು ನನಗೆ ಸಂತೋಷವಾಗಿದೆ. ಆ ಕಾರಣಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಸೋಮವಾರ ನಡೆಯಲಿರುವ ಸಾಯ್ ಟ್ರಯಲ್ನಲ್ಲಿ ನಾನು ಭಾಗಿಯಾಗುವುದಿಲ್ಲ. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಹ್ವಾನದಂತೆ ನಾನು ಅವರನ್ನು ಸೋಮವಾರ ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.
ಹಿಮ್ಮಡಿ ಕಂಬಳದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಟ್ರಾಕ್ ಓಟದಲ್ಲಿ ಕಾಲ್ಬೆರಳುಗಳು ಪ್ರಮುಖ ಪಾತ್ರ ವಹಿಸುತ್ತದೆ. ಕಂಬಳದಲ್ಲಿ ಓಟಗಾರನಂತೆ ಕೋಣಗಳಿಗೂ ಪ್ರಮುಖ ಪಾತ್ರವಿರುತ್ತದೆ. ಆದರೆ ಟ್ರಾಕ್ ಓಟದಲ್ಲಿ ಈ ರೀತಿಯಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಂಬಳ ಓಟದಿಂದ ನನಗೆ ಸಾಕಷ್ಟು ಆದಾಯ ಲಭಿಸುತ್ತದೆ. ಇದರಲ್ಲೇ ನಾನು ಸಂತೋಷವಾಗಿದ್ದೇನೆ ಎಂದು ಶ್ರೀನಿವಾಸ ಗೌಡ ಹೇಳಿದ್ದಾರೆ.