ಪುತ್ತೂರು, ಫೆ 17 (Daijiworld News/MB) : ನಾಲ್ಕು ವರ್ಷಗಳ ಹಿಂದೆ ನೆಕ್ಕಿಲಾಡಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರೂ ಅಪರಾಧಿಯು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಆತನ ಬಂಧನ ಮಾಡುವಂತೆ ನ್ಯಾಯಾಲಯ ವಾರಂಟ್ ಹೊರಡಿಸಿದ್ದು ಶಿಕ್ಷೆಯ ಪ್ರಮಾಣದ ತೀರ್ಪನ್ನು ಫೆ. 20 ಕ್ಕೆ ಮುಂದೂಡಿದೆ.
2016 ರ ಅ. 21 ರಂದು ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪದಲ್ಲಿ 34 ನೇ ನೆಕ್ಕಿಲಾಡಿಯ ರವಿ ನಾಯ್ಕ್ನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಾಡಲಾಗಿತ್ತು. ನ್ಯಾಯಂಗ ಬಂಧನದಲ್ಲಿದ್ದ ಆರೋಪಿ ಆನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.
ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದ್ದರು.
ಈ ಪ್ರಕರಣದ ವಿಚಾರಣೆಯು ಮಂಗಳೂರು ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಆ ಬಳಿಕ ಪುತ್ತೂರು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಪುತ್ತೂರು ನ್ಯಾಯಾಲಯವು ಪೂರ್ಣಗೊಳಿಸಿ ಫೆ.14 ರಂದು ಆರೋಪಿ ತಪ್ಪಿತಸ್ಥ ಎಂದು ಘೋಷಣೆ ಮಾಡಿತ್ತು. ಈ ಸಂದರ್ಭದಲ್ಲಿ ಆರೋಪಿಯು ನ್ಯಾಯಾಲಯದಲ್ಲಿ ಹಾಜರಿದ್ದು, ಶಿಕ್ಷೆಯ ತೀರ್ಪನ್ನು ಫೆ.15ಕ್ಕೆ ಮುಂದೂಡಲಾಗಿತ್ತು.
ಆದರೆ ಫೆ. 15 ರಂದು ಅಪರಾಧಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಆತನನ್ನು ಬಂಧನ ಮಾಡುವಂತೆ ವಾರಂಟ್ ಜಾರಿ ಮಾಡಿ ಉಪ್ಪಿನಂಗಡಿ ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ.
ಹಾಗೆಯೇ ಆರೋಪಿಯ ಜಾಮೀನನ್ನು ರದ್ದು ಮಾಡಿ ಜಾಮೀನುದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ.