ಉಳ್ಳಾಲ: ಫೆ 17 (DaijiworldNews/SM): ತಲಪಾಡಿ ಟೋಲ್ ಗೇಟ್ ನಿರ್ಮಾಣಗೊಂಡ ದಿನದಿಂದ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಾಗುತ್ತಿದೆ. ಇದೀಗ ಇತ್ತೀಚಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಫಾಸ್ಟ್ ಟ್ಯಾಗ್ ಕಡ್ಡಾಯದ ಬಳಿಕ ಮತ್ತೆ ತಲಪಾಡಿ ಟೋಲ್ ಗೇಟ್ ಸುದ್ದಿಯಲ್ಲಿದೆ. ಒಂದೆಡೆ ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳು ದುಬಾರಿ ಹಣ ಪವಾತಿಸುವ ಅನಿವಾರ್ಯತೆ ಇದೆ. ಇದನ್ನು ಕೇಂದ್ರವೇ ಘೋಷಿಸಿರುವುದರಿಂದ ಯಾರಿಗೂ ಪ್ರಶ್ನಿಸುವ ಅವಕಾಶವಿಲ್ಲ. ಆದರೆ, ಈ ನಡುವೆ ಬಸ್ ಗಳ ಪಾಸ್ ದರವನ್ನು ಹೆಚ್ಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಒಂದಲ್ಲ ಎರಡಲ್ಲ ಬರೋಬ್ಬರಿ 40 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಖಾಸಗಿ ಬಸ್ ಗಳು ಟೋಲ್ ಗೇಟ್ ದಾಟುತ್ತಿಲ್ಲ. ಇದು ನೇರವಾಗಿ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ. ತಲಪಾಡಿ ಬಸ್ ನಿಲ್ದಾಣಕ್ಕೆ ತೆರಳಲು ಕರ್ನಾಟಕ ಭಾಗದಿಂದ ಪ್ರಯಾಣಿಕರು ಸುಮಾರು 1 ಕಿಲೋ ಮೀಟರ್ ದೂರ ನಡೆದುಕೊಂಡೇ ತೆರಳಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ಮಕ್ಕಳನ್ನು ಎತ್ತಿಕೊಂಡ ಮಾತೆಯರು, ವಿಶೇಷ ಚೇತನರು, ವೃದ್ಧರು, ಸೊತ್ತು ಸಾಮಾಗ್ರಿಗಳನ್ನು ಹೊತ್ತ ಬಡ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ತೀವ್ರವಾದ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಇದನ್ನು ಖಂಡಿಸಿ ಸ್ಥಳೀಯರು, ಬಸ್ಸು ಮಾಲೀಕರು ಟೋಲ್ ಎದುರುಗಡೆ ಜಮಾಯಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.
ಇನ್ನು ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ದಿನದಿಂದ ತಲಪಾಡಿ ಸಿಟಿ ಬಸ್ ಗಳಿಗೂ ಕಡ್ಡಾಯ ಟೋಲ್ ನೀಡುವಂತೆ ನವಯುಗ ಸಂಸ್ಥೆ ನಿರ್ದೇಶಿಸಿತ್ತು. ವಾರ್ಷಿಕವಾಗಿ 15,000 ರೂ. ನೀಡುವಂತೆಯೂ, 30 ಬಸ್ಸುಗಳಿಗೆ 18 ಲಕ್ಷ ರೂ. ಪಾವತಿಸುವಂತೆ ಸಂಸ್ಥೆ ಕೇಳಿಕೊಂಡಿದೆ. ಆದರೆ ಇದಕ್ಕೆ ತಲಪಾಡಿ ಸಿಟಿ ಬಸ್ಸು ಮಾಲೀಕರ ಸಂಘ ಸಿದ್ದವಿಲ್ಲ. ಇದರ ಬದಲಿಗೆ 4,100 ರೂಪಾಯಿ ಪಾವತಿಸಲು ಬದ್ಧವಾಗಿದೆ. ಅಲ್ಲದೆ ಹೆಚ್ಚು ಸುಂಕ ಕಟ್ಟಿದ್ದಲ್ಲಿ ಅದರ ಹೊರೆಯನ್ನು ಬಡ ಪ್ರಯಾಣಿಕನ ಮೇಲೆ ಹಾಕಬೇಕಾಗುತ್ತದೆ. ಹಾಗೂ ಟಿಕೇಟಿಗೆ 3 ರೂಪಾಯಿ ಏರಿಸುವುದು ಅನಿವಾರ್ಯ ಎಂಬುದು ಬಸ್ಸು ಮಾಲೀಕರ ವಾದ.
ಈ ಕುರಿತು ಟೋಲ್ ಸಿಬ್ಬಂದಿ, ಬಸ್ಸು ಮಾಲೀಕರು ಉಳ್ಳಾಲ ಠಾಣೆಯಲ್ಲಿ ಮಾತುಕತೆ ನಡೆಸಿದರೂ, ಸಂಧಾನ ವಿಫಲವಾಗಿತ್ತು. ಅಲ್ಲದೆ ಫಾಸ್ಟ್ ಟ್ಯಾಗ್ ಕಡ್ಡಾಯದ ನಂತರ ಕೇವಲ ಒಂದು ಗೇಟಿನಲ್ಲಿ ನಗದು ಪಾವತಿಸುವ ವಾಹನಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಸಿಟಿ ಬಸ್ಸುಗಳಿಗೆ ಟೈಮಿಂಗ್ ಪಾಲಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಗೇಟು ತೆರೆದಿಡುವಂತೆಯೂ ಹಾಗೂ ನಿಗದಿತ ದರ ಪಾವತಿ ಎಂಬ ಎರಡು ಷರತ್ತುಗಳಿಗೆ ಟೋಲ್ ಸಿಬ್ಬಂದಿ ಒಪ್ಪಿಕೊಂಡಲ್ಲಿ ತಲಪಾಡಿ ಕೊನೆಯ ನಿಲ್ದಾಣವರೆಗೆ ಬಸ್ಸುಗಳನ್ನು ಕೊಂಡೊಯ್ಯಲು ಸಾಧ್ಯ ಎಂಬುವುದು ಬಸ್ ಮಾಲಕರ ವಾದ. ಅಲ್ಲದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ಟೋಲ್ ಗೇಟ್ ಗಳಲ್ಲಿ ಸುಂಕ ಪಾವತಿಸುವುದು ಅಗತ್ಯ ಹಾಗೂ ಅನಿವಾರ್ಯ. ಆದರೆ, ಜನರ ಮೇಲೆ ಹೊರೆಯಾಗುವ ಸುಂಕದಿಂದಾಗಿ ಮುಗ್ದ ಬಡ ಪ್ರಯಾಣಿಕರು ಕಂಗಾಲಾಗಿದ್ದಾರೆ. ಸಾರ್ವಜನಿಕರ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ನವಯುಗ್ ಸಂಸ್ಥೆ, ಹೆದ್ದಾರಿ ಪ್ರಾಧಿಕಾರ ಹಾಗೂ ಇಲ್ಲಿನ ಜನನಾಯಕರು ಎಚ್ಚೆತ್ತುಕೊಂಡು ಬಡ ಪ್ರಯಾಣಿಕರ ಸಮಸ್ಯೆಗೆ ಪರಿಹಾರವನ್ನು ಕಲ್ಪಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ, ಹೋರಾಟದ ಬಿಸಿ ತಟ್ಟೋದರಲ್ಲಿ ಅನುಮಾನವೇ ಇಲ್ಲ.