ಉಳ್ಳಾಲ, ಫೆ 17 (DaijiworldNews/SM): ನೇತ್ರಾವತಿ ಸೇತುವೆಯಲ್ಲಿ ಕಾರು ಹಾಗೂ ಅದರೊಳಗೆ ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ತಂದೆ ಹಾಗೂ ಮಗನ ಪ್ರಕರಣಕ್ಕೆ ಸಂಬಂಧಿಸಿ ಅಗ್ನಿ ಶಾಮಕ ದಳ ಸೇರಿದಂತೆ ಮೀನುಗಾರರು ಹಲವು ದೋಣಿಗಳ ಮೂಲಕ ನೇತ್ರಾವತಿ ನದಿಯಲ್ಲಿ ಸೋಮವಾರ ಬೆಳಗ್ಗಿನಿಂದ ಸಂಜೆಯವರೆಗೂ ಶೋಧ ಕಾರ್ಯ ನಡೆಸಿದರೂ ಪತ್ತೆ ಕಾರ್ಯ ಸಾಧ್ಯವಾಗಿಲ್ಲ.
ಫೆಬ್ರವರಿ 16ರಂದು ನಸುಕಿನ ಜಾವ ಬಂಟ್ವಾಳ ಬಾಳ್ತಿಲದ ಗೋಪಾಲಕೃಷ್ಣ ರೈ, ಪುತ್ರ ನಮೀಶ್ ರೈ(6) ಇಬ್ಬರು ನಾಪತ್ತೆಯಾಗಿದ್ದರು. ಇವರಿದ್ದ ಕಾರು, ಪರ್ಸ್, ಮಗನ ಚಪ್ಪಲಿ ಕಾರಿನೊಳಕ್ಕೆ ಸಿಕ್ಕಿತ್ತು. ಎಂಟು ಪುಟಗಳ ಡೆತ್ ನೋಟ್ ಕೂಡಾ ಕಾರಿನ ಡ್ಯಾಷ್ ಬೋರ್ಡಿನಲ್ಲಿ ಪತ್ತೆಯಾಗಿತ್ತು. ಪಾವೂರುಗುತ್ತು ಸಮೀಪ ನಡೆಯುತ್ತಿದ್ದ ಪೈಚಿಲ್ ನೇಮ ನಡೆಯುತ್ತಿದ್ದ ಜಾಗದಿಂದ ಪುತ್ರನ ಜತೆಗೆ ತೆರಳಿದ್ದ ಗೋಪಾಲಕೃಷ್ಣ ರೈ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು.
ಮಗನನ್ನು ನದಿಗೆ ಎಸೆದು, ತಾನು ಕೂಡ ಆತ್ಮಹತ್ಯೆ ನಡೆಸುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಶೋಧ ಕಾರ್ಯ ನಡೆಸಲಾಯಿತು. ಸೋಮವಾರದಂದು ಅಗ್ನಿ ಶಾಮಕ ದಳ ಒಂದು ದೋಣಿ, ಪಾವೂರು ನಿವಾಸಿಗಳ ಎರಡು, ಬೆಂಗ್ರೆಯ ಎರಡು, ಉಳ್ಳಾಲ ಹೊಯ್ಗೆಯ ಕಿಂಗ್ಸ್ ಸ್ಟಾರ್ ಸೇವಾ ಸಮಿತಿಯ ಒಂದು ದೋಣಿ ಮತ್ತು ಕಾಫಿ ಡೇ ಮಾಲೀಕ ಸಿದ್ಧಾರ್ಥ ಹುಡುಕಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೊಯ್ಗೆ ಬಝಾರಿನ ತಂಡವೂ ನದಿ ಸೇರಿದಂತೆ ಸಮುದ್ರದಲ್ಲಿಯೂ ಶೋಧ ಕಾರ್ಯವನ್ನು ನಡೆಸಿದೆ.
ಆದರೆ ಸಂಜೆಯವರೆಗೂ ಯಾವುದೇ ರೀತಿಯ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.