ಮಂಗಳೂರು, ಫೆ 9: ನಗರದ ಪೊಲೀಸರು ಕುಖ್ಯಾತ ರೌಡಿ, ಟಾರ್ಗೆಟ್ ಗ್ಯಾಂಗ್ ಇಲ್ಯಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಳ್ಳಾಲ ನಿವಾಸಿ ಸಮೀರ್ (26) ಬಂಧಿತ. ಮಂಗಳೂರು ಸಿಸಿಬಿ ಪೊಲೀಸರು ಕೇರಳದ ಅಡಗುತಾಣದಿಂದ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಜನವರಿ 13 ರಂದು ಬೆಳಿಗ್ಗೆ ಇಲ್ಯಾಸ್ ಮೇಲೆ ನಡೆದ ದಾಳಿಯಲ್ಲಿ ಆರೋಪಿ ಸಮೀರ್ ನೇರವಾಗಿ ಭಾಗಿಯಾಗಿದ್ದ ಎನ್ನಲಾಗಿದೆ. ಇದೀಗ ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಮಂಗಳೂರಿಗೆ ಕರೆ ತರಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟನೆಯ ವಿವರ:
ಮಂಗಳೂರಿನ ಜಪ್ಪು ಕುಡ್ಪಾಡಿ ಎಂಬಲ್ಲಿರುವ ಮಸೀದಿಯ ಎದುರುಗಡೆಯ ಫ್ಲಾಟ್ ನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ ಇಲ್ಯಾಸ್ ನನ್ನು ಜನವರಿ 13 ರಂದು ಮುಂಜಾನೆ ದುಷ್ಕರ್ಮಿಗಳಿಬ್ಬರು ಸೇರಿಕೊಂಡು ಹತ್ಯೆ ಮಾಡಿದ್ದರು. ಮನೆ ಬಾಗಿಲನ್ನು ಒಡೆದು ಒಳ ನುಗ್ಗಿ ಮಲಗಿದ್ದ ಇಲ್ಯಾಸ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಲ್ಯಾಸ್ ನನ್ನು ಆಸ್ಪತ್ರೆ ಗೆ ಸಾಗಿಸಲಾಯಿತಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದ. ಇಲ್ಯಾಸ್ ಒರ್ವ ಕುಖ್ಯಾತ ರೌಡಿ ಶೀಟರ್ ಆಗಿದ್ದ. 23 ಕ್ಕೂ ಮಿಕ್ಕಿ ಅಪರಾಧ ಪ್ರಕರಣಗಳಾದ ಹನಿಟ್ರಾಪ್, ಸುಲಿಗೆ, ಅಪಹರಣ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳು ಆತನ ಮೇಲಿತ್ತು.