ಕಾಸರಗೋಡು, ಫೆ 18 (Daijiworld News/MB) : ಇಂದೊದು ಅಪರೂಪದ ಮದುವೆ. ಇಂದಿನ ದಿನಗಳಲ್ಲಿ ಜಾತಿ , ಧರ್ಮ ಎಂಬ ದ್ವೇಷ ಸಮಾಜದಲ್ಲಿ ಎದ್ದು ನಿಂತಿರುವ ಮಧ್ಯೆ ಕಾಞ೦ಗಾಡ್ನಲ್ಲಿ ನಡೆದ ವಿವಾಹವು ಸಮಾಜಕ್ಕೆ ಸಂದೇಶ ಸಾರುತ್ತಿದೆ.
ಚಿಕ್ಕಂದಿನಿಂದಲೇ ಪೋಷಕರನ್ನು ಕಳೆದು ಅನಾಥವಾಗಿದ್ದ ಹಿಂದೂ ಬಾಲಕಿಗೆ ತಮ್ಮ ಮಗಳಂತೆ ಸಾಕಿ ಸಲಹಿದವರು ಕೆ.ಅಬ್ದುಲ್ಲಾ - ಖದೀಜಾ ದಂಪತಿ . ಕೊನೆಗೂ ತಮ್ಮ ಸ್ವಂತ ಮಗಳಂತೆ ವಿವಾಹವನ್ನು ಹಿಂದೂ ಯುವಕನ ಜೊತೆಯೇ ನೆರವೇರಿಸಿಕೊಡುವ ಮೂಲಕ ಸೌಹಾರ್ಧತೆಯ ಸಂದೇಶವನ್ನು ತೋರಿಸಿಕೊಟ್ಟಿದ್ದಾರೆ.
ಹನ್ನೆರಡು ವರ್ಷಗಳ ಹಿಂದೆ, ತನ್ನ ಹತ್ತನೇ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥಳಾದ ರಾಜೇಶ್ವರಿ ಯನ್ನು ಮಗಳಾಗಿ ಸ್ವೀಕರಿಸಿದ ಎ.ಅಬ್ದುಲ್ಲಾ ಮತ್ತು ಕದೀಜಾ ತಮ್ಮ ಸ್ವಂತ ಮಗಳಂತೆ ಸಾಕಿ,ಸಲಹಿ, ಸಕಲ ಖರ್ಚುಗಳನ್ನೂ ತಾವೇ ಭರಿಸಿ ಅವಳನ್ನು ಯೋಗ್ಯ ವರನಿಗೆ ಹಿಂದೂ ಧರ್ಮದ ಸಂಪ್ರದಾಯಗಳ ಪ್ರಕಾರ ವಿವಾಹ ನಡೆಸಿಕೊಟ್ಟಿದ್ದಾರೆ.
ಈಗ ರಾಜೇಶ್ವರಿಗೆ 22 ವರ್ಷ . ಅಬ್ದುಲ್ಲ-ಖದೀಜಾ ದಂಪತಿಯ ಸಾಕು ಪುತ್ರಿ ತಂಜಾವೂರು ನಿವಾಸಿಯಾದ ರಾಜೇಶ್ವರಿ 7 ವರ್ಷ ಪ್ರಾಯವಿದ್ದಾಗ ಇಲ್ಲಿಗೆ ತಲುಪಿದ್ದರು. ಆಕೆಗೆ 10 ವರ್ಷವಾದಾಗ ತಂದೆ- ತಾಯಿ ನಿಧನ ಹೊಂದಿದ್ದರು. ತಂದೆ - ತಾಯಿ ತೀರಿಕೊಂಡಿರುವುದಾಗಿ ಈ ಸಂದರ್ಭದಲ್ಲಿ ತಿಳಿದುಬಂದಿದ್ದು , ಇದರಿಂದ ಈ ಬಾಲಕಿಯನ್ನು ಅಬ್ದುಲ್ಲಾ ರವರ ಕುಟುಂಬದವರು ತಮ್ಮ ಮಗಳಂತೆ ಪೋಷಣೆ ಮಾಡಿದ್ದರು . ಅಬ್ದುಲ್ಲಾರ ಮೂವರು ಮಕ್ಕಳ ಜೊತೆ ಈಕೆ ಇನ್ನೊಬ್ಬಳು ಮಗಳೆಂದು ಗುರುತಿಸಿಕೊಂಡಳು . ಈಗ 22 ವರ್ಷ ಪ್ರಾಯ ಆಗುತ್ತಲೇ ಅಬ್ದುಲ್ಲರು ವಿವಾಹದ ಬಗ್ಗೆ ಚಿಂತನೆ ನಡೆಸಿದರು. ರಾಜೇಶ್ವರಿ ಮತ್ತು ಅಬ್ದುಲ್ಲಾರಿಗೆ ಇಷ್ಟಗೊಂಡ ವರನನ್ನು ಹುಡುಕಿದರು. ಕೊನೆಗೆ ಕಾಞ೦ಗಾಡ್ ಪುದಿಯ ಕೋಟದ ಬಾಲಚಂದ್ರನ್ - ಜಯಂತಿ ದಂಪತಿ ಪುತ್ರ ವಿಷ್ಣುಪ್ರಸಾದ್ ಜೊತೆ ವಿವಾಹಕ್ಕೆ ತೀರ್ಮಾನಿಸಲಾಯಿತು .
ಕ್ಷೇತ್ರದ ಮುಖ್ಯ ತಂತ್ರಿಯವರ ನೇತೃತ್ವದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ರಾಜೇಶ್ವರಿ ಸಂಬಂಧಿಕರಾಗಿ ಅಬ್ದುಲ್ಲಾ-ಕದೀಜಾ ದಂಪತಿಗಳು, ವರ ವಿಷ್ಣುಪ್ರಸಾದ್ರವರ ಪೋಷಕರು , ಸಂಬಂಧಿಕರು , ಹಿತೈಷಿಗಳು ಪಾಲ್ಗೊಂಡಿದ್ದರು.