ಪುತ್ತೂರು, ಫೆ 18 (Daijiworld News/MB) : ಪುತ್ತೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಒಂದರಲ್ಲಿ ನಿರ್ವಾಹಕನು ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿ ನಿರ್ವಾಹಕನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಹಾಗೆಯೇ ಆತನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲು ಮಾಡಿ ಬಂಧಿಸಲಾಗಿದೆ.
ಮಹಿಳೆಯು ಈ ಬಸ್ಸಿಗೆ ಹಾಸನದಲ್ಲಿ ಹತ್ತಿದ್ದು ಇಸುಬು ಅಲಿ ಎಂಬ ನಿರ್ವಾಹಕ ಮಹಿಳೆಯ ಬಳಿ ಕುಳಿತುಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳೆಯು ಇದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದ್ದು ವಿಡಿಯೋ ಗಮನಿಸಿದ ಕೆಎಸ್ಆರ್ಟಿಸಿ ಎಂ.ಡಿ. ನಿರ್ವಾಹಕನನ್ನು ಅಮಾನತು ಮಾಡಿ ತನಿಖೆಗೆ ಆದೇಶಿದ್ದಾರೆ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಈ ಹಿಂದೆ ಆರೋಪಿಯು ಧರ್ಮಸ್ಥಳ ಡಿಪೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಆ ಸಂದರ್ಭದಲ್ಲೂ ಮಹಿಳೆಯರಿಗೆ ಕಿರುಕುಳ ನೀಡಿದ್ದ ವಿಚಾರದಲ್ಲಿ ಸಂಘಟನೆಯವರಿಂದ ಹಲ್ಲೆಗೆ ಒಳಗಾಗಿದ್ದ ಎಂದು ತಿಳಿದು ಬಂದಿದೆ.