ಮಂಗಳೂರು, ಫೆ 18 (Daijiworld News/MB) : ಕೆಲವೇ ದಿನಗಳ ಹಿಂದೆ ಕಂಬಳ ಓಟದಲ್ಲಿ ದಾಖಲೆ ಸೃಷ್ಟಿಸಿ ಮೂಡುಬಿದಿರೆ ಮಿಜಾರಿನ ಶ್ರೀನಿವಾಸ ಗೌಡ ಜನಮನ್ನಣೆಗೆ ಪಾತ್ರರಾಗಿದ್ದಾರೆ, ಇದೀಗ ನಿಶಾಂತ್ ಶೆಟ್ಟಿ ಆ ದಾಖಲೆಯನ್ನು ಮುರಿಯುವ ಮೂಲಕ ಕಂಬಳ ಚರಿತ್ರೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ.
ಶ್ರೀನಿವಾಸ್ ಗೌಡ ಅವರು 9.55 ಸೆಕೆಂಡ್ಗಳಲ್ಲಿ 100 ಮೀಟರ್ ಓಟದಲ್ಲಿ ತಲುಪಿದ್ದು ಇದೀಗ ನಿಶಾಂತ್ ಶೆಟ್ಟಿಯವರು 9.52 ಸೆಕೆಂಡ್ಗಳಲ್ಲಿ 100 ಮೀಟರ್ ಕ್ರಮಿಸಿ ದಾಖಲೆ ಮುರಿದಿದ್ದಾರೆ.
ಫೆ. 1 ರಂದು ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ ಅವರು 142. 50 ಮೀಟರ್ ದೂರಕ್ಕೆ ಕೇವಲ 13.62 ಸೆಕೆಂಡ್ಗಳಲ್ಲಿ ತಲುಪಿದ್ದರು. ಇದೇ ಅವಧಿಯನ್ನು ನೂರು ಮೀಟರ್ಗೆ ಹೋಲಿಕೆ ಮಾಡಿದರೆ 9.55 ಸೆಕೆಂಡ್ ಆಗಿದೆ. ಆದರೆ ಇದೇ ದಾಖಲೆಯನ್ನು ಭಾನುವಾರ ವೇಣೂರಿನಲ್ಲಿ ನಡೆದ ಸೂರ್ಯ ಚಂದ್ರ ಜೋಡು ಕಂಬಳದಲ್ಲಿ ಬಜಗೋಳಿ ಜೋಗುಬೆಟ್ಟಿ ನಿಶಾಂತ್ ಶೆಟ್ಟಿ ಅವರು ಮುರಿದು ಮತ್ತೊಂದು ದಾಖಲೆ ಬರೆದಿದ್ದಾರೆ.
ಹಗ್ಗ ಹಿರಿಯ ವಿಭಾಗದ ಸೆಮಿಫೈನಲ್ನಲ್ಲಿ ಗೋಪಾಲಕೃಷ್ಣ ಭಟ್ ಅವರ ಕೋಣಗಳು 143 ಮೀಟರ್ ಉದ್ದದ ಕರೆಯಲ್ಲಿ 13.61 ಸೆಕೆಂಡ್ನಲ್ಲಿ ಗುರಿ ತಲುಪಿದ್ದು ಈ ವೇಗ 100 ಮೀಟರ್ಗೆ ಹೋಲಿಸಿದರೆ 9.52 ಸೆಕೆಂಡ್ ಆಗಿದೆ.
2019 ರಲ್ಲಿ ಪುತ್ತೂರು ಕಂಬಳದಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಕ್ಕೇರಿ ಸುರೇಶ್ ಶೆಟ್ಟಿ 9.57 ಸೆ. ಹಾಗೂ 2015 ರಲ್ಲಿ ಇರ್ವತ್ತೂರು ಆನಂದ್ 9.57 ಸೆ.ಗಳಲ್ಲಿ 100 ಮೀಟರ್ ಓಡುವ ಮೂಲಕ ದಾಖಲೆ ಮಾಡಿದ್ದರು. 2009 ರಲ್ಲಿ ಅಥ್ಲೆಟಿಕ್ ಕ್ಷೇತ್ರದಲ್ಲಿ ಜಮೈಕಾದ ಉಸೇನ್ ಬೋಲ್ಟ್ 100 ಮೀಟರ್ ಓಟವನ್ನು 9.58 ಸೆಕೆಂಡ್ಗಳಲ್ಲಿ ಕ್ರಮಿಸಿ ವಿಶ್ವದಾಖಲೆ ಮಾಡಿದ್ದರು. ಅವರ ಸಾಧನೆಯನ್ನು ಇಲ್ಲಿ ಹೋಲಿಸಿದರೆ ಈ ನಾಲ್ವರು ಆ ದಾಖಲೆಯನ್ನು ಮುರಿದಿದ್ದಾರೆ.
ಕಂಬಳದ ಹಗ್ಗ ಹಿರಿಯ ವಿಭಾಗದ ಸೆಮಿಫೈನಲ್ನಲ್ಲಿ ನಿಶಾಂತ್ ಶೆಟ್ಟಿ ಹೊಸ ದಾಖಲೆ ಬರೆದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮಂದಿ ಅಭಿನಂದನೆ ಸಲ್ಲಿಸಿದ್ದಾರೆ. ಕಂಬಳದಲ್ಲಿ ಒಂದರ ಹಿಂದೆ ಒಂದರಂತೆ ದಾಖಲೆ ಸೃಷ್ಟಿಯಾಗುತ್ತಿರುವುದು ಕಂಬಳಾಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.
ಈ ದಾಖಲೆಯ ಕುರಿತಾಗಿ ಮಾತನಾಡಿದ ನಿಶಾಂತ್ ಶೆಟ್ಟಿ, "ನಾನು ವೇಣೂರು ಕಂಬಳದ ಹಗ್ಗ ಹಿರಿಯ ವಿಭಾಗದ ಸೆಮಿಫೈನಲ್ನಲ್ಲಿ ಗೋಪಾಲಕೃಷ್ಣ ಭಟ್ ಅವರ ಕೋಣಗಳನ್ನು ಓಡಿಸಿದ್ದು ೧೦೦ ಮೀಟರ್ನ್ನು ೯.೫೨ ಸೆಕೆಂಡ್ನಲ್ಲಿ ಕ್ರಮಿಸಿದ್ದೇನೆ. ಈ ಟೈಮಿಂಗ್ಸ್ ನನ್ನ ಉತ್ತಮ ಟೈಮಿಂಗ್ಸ್ ಆಗಿದ್ದು ಈ ಬಗ್ಗೆ ನನಗೆ ಬಹಳ ಖುಷಿಯಿದೆ. ಉಸೇನ್ ಬೋಲ್ಟ್ನಂತಹ ವಿಶ್ವದ ಶ್ರೇಷ್ಠ ಅಥ್ಲೀಟ್ಗಳ ಜೊತೆ ನಮ್ಮ ಓಟವನ್ನು ಹೋಲಿಕೆ ಮಾಡುವುದು ಸರಿಯಲ್ಲ. ಆ ಓಟಕ್ಕೂ ಕಂಬಳಕ್ಕೂ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.