ಮಂಗಳೂರು, ಫೆ 18 (Daijiworld News/MB) : ಕಾಗೆಗಳನ್ನು ಅಪಶಕುನ ಎಂದು ಕೊಳ್ಳುವವರೇ ಜಾಸ್ತಿ. ಶ್ರಾದ್ಧಕ್ಕೆ ತುಳುನಾಡಿನಲ್ಲಿ ಕಾಗೆ ಬಂದಿಲ್ಲವೆಂದರೆ ಏನೋ ಅಪಶಕುನ ಕಾದಿದೆ, ಹೀಗಾಗಿ ಮೃತರ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ ಎಂದುಕೊಳ್ಳುವುದೂ ಇದೆ. ಇನ್ನು ಶನಿಯ ವಾಹನವೂ ಕಾಗೆ ಆದ್ದರಿಂದ ಕಾಗೆಗಳ ಬಗ್ಗೆ ಹಿಂದಿನಿಂದಲೂ ಶುಭಶಕುನ, ಅಪಶಕುನ ಎರಡೂ ರೂಢಿಯಲ್ಲಿದೆ. ಆದರೆ ಕಾಸರಗೋಡಿನ ಕೊರುವೈಲು ಎಂಬಲ್ಲಿ ಕಾಗೆಗಳಿಗೆ ಹೊತ್ತು ಹೊತ್ತಿಗೆ ಅನ್ನ ನೀಡುವ "ತಾಯಿ" ಒಬ್ಬರಿದ್ದಾರೆ. ಅವರು ಕರೆದ ಕೂಡಲೇ ಓಡಿಬರುವ ಹತ್ತಾರು ಕಾಗೆಗಳು ಅವರ ಕೈಯಿಂದಲೇ ಅನ್ನ ಪಡೆದು ತಿಂದು ಹಾರಿಹೋಗುವಷ್ಟರ ಮಟ್ಟಿಗೆ ಬಾಂಧವ್ಯ ಬೆಳೆದಿದೆ.
ಕೊರುವೈಲು ನಿವಾಸಿ ಹೇಮಲತಾ ಅವರು ಗೃಹಿಣಿ. ಇವರ ಪತಿ ಸೋಮನಾಥ ನಾಯಕ್ ನಿವೃತ್ತ ಬ್ಯಾಂಕ್ ಉದ್ಯೋಗಿ. ತಮ್ಮ ಮನೆಯ ಕಂಪೌಂಡ್ ಗೋಡೆಯ ಮೇಲೆ ಬಂದು ಕೂರುತ್ತಿದ್ದ ಕಾಗೆಗಳಿಗೆ ಅನ್ನ ನೀಡುತ್ತಿದ್ದ ಇವರು ಕಳೆದ 20 ವರ್ಷಗಳಿಂದ ನಿರಂತರ ಪ್ರತಿನಿತ್ಯ ಬೆಳಗ್ಗೆ ಸಂಜೆ ಅನ್ನ ಹಾಕಲು ಶುರುಮಾಡಿದರು.
ಅಂದಿನಿಂದ 20-30ರಷ್ಟು ಕಾಗೆಗಳು ಬಂದು ಸೇರುತ್ತಿದ್ದು ನಿತ್ಯ ಕಾಗೆಗಳಿಗೆ ಅನ್ನದಾಸೋಹ ಮಾಡುತ್ತಿದ್ದಾರೆ. ಅನ್ನ ತಿಂದು ಖುಷಿಯಿಂದ ಹಾರಿಹೋಗುವುದನ್ನು ನೋಡಲು ಸಂತೃಪ್ತಿಯಾಗುತ್ತದೆ ಅನ್ನೋದು ಹೇಮಲತಾ ಅವರ ಮನದಾಳದ ಮಾತುಗಳು.
ಮೊಬೈಲ್ ಟವರ್ಗಳಿಂದಾಗಿ ನಶಿಸುತ್ತಿರುವ ಕಾಗೆ ಸಂತತಿ ಇವರ ಪ್ರಯತ್ನದಿಂದಾಗಿ ಹೆಚ್ಚಾಗುತ್ತಿದ್ದು ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.