ಬೈಂದೂರು, ಫೆ 18 (DaijiworldNews/SM): ನಾಲ್ಕೂವರೆ ವರ್ಷಗಳ ಹಿಂದೆ ಬೈಂದೂರಿನ ಒತ್ತಿನೆಣೆಯಲ್ಲಿ ನಡೆದಿದ್ದ ಅಪ್ರಾಪ್ತ ವಿದ್ಯಾರ್ಥಿನಿಯ ಕೊಲೆ ಪ್ರಕರಣ ಸಂಬಂಧ ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿರುವ ಆರೋಪಿ ಸುನಿಲ್ ಯಾನೆ ಕೆಪ್ಪೆ(23) ಎಂಬಾತನ ಜಾಮೀನು ಅರ್ಜಿಯನ್ನು ಕುಂದಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಾಧೀಶರಾದ ನರಹರಿ ಪ್ರಭಾಕರ್ ಮರಾಠೆ ಸೋಮವಾರ ಅರ್ಜಿ ವಜಾಗೊಳಿಸಿ ಆದೆಶ ನೀಡಿದ್ದಾರೆ.
2015ರ ಜೂ. 17 ರಂದು ಬೈಂದೂರು ಒತ್ತಿನೆಣೆ ಬಳಿ ನಡೆದಿದ್ದ ಈ ಕೊಲೆ ಪ್ರಕರಣದಲ್ಲಿ ಯಡ್ತರೆ ನಿವಾಸಿಗಳಾದ ಸುನಿಲ್(19) ಹಾಗೂ ಅಕ್ಷಯ್(19) ಎಂಬ ಇಬ್ಬರು ಆರೋಪಿಗಳನ್ನು ಪೊಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಕ್ಷಯ್ಗೆ ನ್ಯಾಯಾಲಯವು ಜಾಮೀನು ನೀಡಿತ್ತು. ಸುನಿಲ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ಜಾಮೀನು ನಿರಾಕರಿಸಲಾಗಿತ್ತು.
ಇದೀಗ ಪ್ರಮುಖ ಸಾಕ್ಷಿಗಳನ್ನು ನ್ಯಾಯಾಲಯ ತನಿಖೆ ನಡೆಸಿದ್ದು, ಯಾವುದೇ ಸಾಕ್ಷ್ಯ ನಾಶಗಳಿಗೆ ಅವಕಾಶ ಇಲ್ಲ ಎಂದು ಆರೋಪಿ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಹಾಗೂ ತಜ್ಞರ ವಿಚಾರಣೆ ಬಾಕಿ ಇರುವ ಕಾರಣ ಮತ್ತು ಪ್ರಕರಣ ಅಂತಿಮ ಹಂತದಲ್ಲಿರುವ ಕಾರಣ ಜಾಮೀನು ನೀಡುವುದು ಅಸಮಂಜಸವಾಗುತ್ತದೆ ಎಂದು ಅಭಿಪ್ರಯಾಪಟ್ಟ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
೨೦೨೦ರ ಜೂನ್ ತಿಂಗಳಿನಲ್ಲಿ ಪ್ರಕರಣದ ವಿಚಾರಣೆ ಅಂತ್ಯಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ.