ಮಂಗಳೂರು, ಫೆ 19 (Daijiworld News/MB) : ಫ್ರಾನ್ಸ್ನಿಂದ ಐಷಾರಾಮಿ ಪ್ರಯಾಣಿಕರ ಕೋಸ್ಟಾ ವಿಕ್ಟೋರಿಯಾ ಹಡಗೊಂದು ಸೋಮವಾರ ಆಗಮಿಸಿದ್ದು ಇದರಲ್ಲಿ ಬಂದ ಪ್ರವಾಸಿ ಮಹಿಳೆಗೆ ನಗರದ ಟ್ಯಾಕ್ಸಿ ಚಾಲಕ ಕೀಟಲೆ ಮಾಡಿದ ಆರೋಪ ಮಾಡಲಾಗಿದೆ.
ಈ ಘಟನೆ ನವಮಂಗಳೂರು ಬಂದರಿನಲ್ಲಿ ಘಟಿಸಿದೆ. ಸೋಮವಾರ ಬೆಳಿಗ್ಗೆ ಮುಂಬೈನಿಂದ ನವಮಂಗಳೂರು ಬಂದರಿಗೆ ಸುಮಾರು 500 ಕ್ಕೂ ಹೆಚ್ಚು ಪ್ರವಾಸಿಗರು ಇದ್ದ ಹಡಗು ಆಗಮಿಸಿದ್ದು ಅವರನ್ನು ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಬರಮಾಡಿಕೊಳ್ಳಲಾಗಿತ್ತು. ಬಳಿಕ ಪ್ರವಾಸಿಗರು ಟ್ಯಾಕ್ಸಿ ಸೇರಿದಂತೆ ಬೇರೆ ಬೇರೆ ವಾಹನಗಳ ಮೂಲಕ ನಗರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದು ಸಂಜೆ ವಾಪಾಸ್ಸಾಗುತ್ತಿದ್ದರು.
ಈ ಸಂದರ್ಭದಲ್ಲಿ ಟ್ಯಾಕ್ಸಿ ಚಾಲಕ ಮಹಿಳೆಯೊಂದಿಗೆ ಮಾತನಾಡುತ್ತಾ ಆಕೆಗೆ ಕೀಟಲೆ ನೀಡಿದ್ದಾನೆ ಎಂದು ಹೇಳಲಾಗಿದೆ. ಇದರಿಂದ ಆತಂಕಗೊಂಡ ಮಹಿಳೆ ಇತರರಿಗೆ ತಿಳಿಸಿದ್ದು ವಿಷಯ ತಿಳಿದ ಪಣಂಬೂರು ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹ ಮಾಡಿದ್ದಾರೆ.
ಅಧಿಕಾರಿಗಳು ಬಂದು ಟ್ಯಾಕ್ಸಿ ಚಾಲಕನನ್ನು ವಿಚಾರಿಸಿದಾಗ ಬಾಡಿಗೆ ವಿಚಾರದಲ್ಲಿ ಇಬ್ಬರ ನಡುವೆ ಮಾತುಕತೆ ಬೆಳೆದಿದೆ ಎಂದು ಆತ ಸ್ಪಷ್ಟನೆ ನೀಡಿದ್ದಾನೆ. "ಮಹಿಳೆ 2,000 ರೂಪಾಯಿಯ ನೋಟನ್ನು ನೀಡಿದ್ದು ಬಾಡಿಗೆಯಾಗಿ 1,000 ರೂಪಾಯಿಯನ್ನು ತೆಗೆದುಕೊಂಡಿದ್ದೆ ಆದರೆ ಫ್ರಾನ್ಸ್ ಮಹಿಳೆ 800 ರೂಪಾಯಿ ಮಾತ್ರ ತೆಗೆದುಕಒಂಡು 1,200 ರೂಪಾಯಿ ಮರಳಿ ನೀಡುವಂತೆ ಒತ್ತಾಯ ಮಾಡಿದ್ದರು. ಇದಕ್ಕೆ ನನ್ನ ವೇಟಿಂಗ್ ಚಾರ್ಚ್ 200 ಆಗುತ್ತದೆ ಎಂದು ನಾನು ಹೇಳಿದೆ. ಅದಕ್ಕೆ ಮಹಿಳೆ ವಾಗ್ವಾದ ಮಾಡಿದ್ದಾರೆ" ಎಂದು ಹೇಳಿದ್ದಾರೆ.
ಚಾಲಕ ಹಾಗೂ ಮಹಿಳೆಯನ್ನು ವಿಚಾರಣೆ ನಡೆಸಿದ ಪೊಲೀಸರು ಚಾಲಕನಿಗೆ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ. ಈ ಸಮಸ್ಯೆ ಬಗೆಹರಿದ ಬಳಿಕ ಹಡಗು ಈಗ ಕೊಚ್ಚಿಯತ್ತ ಹೊರಟಿದೆ.