ಉಡುಪಿ, ಫೆ 19 (Daijiworld News/MB) : ಅತಿವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಕ್ರೇನ್ ಚಲಾಯಿಸಿ ಬೈಕ್ ಹಾಗೂ ಟೆಂಪೋ ಟ್ರಾವೆಲರ್ಗೆ ಡಿಕ್ಕಿಯಾಗಿ ಮಹಿಳೆ ಮೃತಪಟ್ಟು ಮತ್ತೋರ್ವರಿಗೆ ಗಂಭೀರ ಗಾಯವಾದ ಪ್ರಕರಣಕ್ಕೆ ಸಂಬಂಧಿಸಿ ಕ್ರೇನ್ ಚಾಲಕ ಪಾಣೆಮಂಗಳೂರು ಗುಡ್ಡೆಯಂಗಡಿ ಹೌಸ್ನ ರೋಹಿತ್ನಿಗೆ ಉಡುಪಿಯ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ಎಂ.ಎಸ್. ಅವರು 1 ವರ್ಷ 5 ತಿಂಗಳು ಸಾದಾ ಶಿಕ್ಷೆ ಹಾಗೂ ಮೂರು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
2015 ರಲ್ಲಿ ರೋಹಿತ್ ತನ್ನ ಕ್ರೇನ್ ಅನ್ನು ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಚಲಾವಣೆ ಮಾಡುತ್ತಿದ್ದ ಸಂದರ್ಭದಲ್ಲಿ ಉಡುಪು ಸಮೀಪದ ಸಂತಕಟ್ಟೆ ಎಂಬಲ್ಲಿ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿ ಬೈಕ್ ಹಾಗೂ ಅದರ ಹಿಂದೆ ಇದ್ದ ಟೆಂಪೋ ಟ್ರಾವೆಲರ್ಗೆ ಡಿಕ್ಕಿಯಾಗಿತ್ತು.
ಡಿಕ್ಕಿಯಾದ ಪರಿಣಾಮ ಬೈಕ್ ಸವಾರನಾಗಿದ್ದ ಪ್ರದೀಪ್ ಅಚಾರ್ಯ ಹಾಗೂ ಅವನ ತಂಗಿ ಪವಿತ್ರಾ ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ಪವಿತ್ರಾ ಅವರು ಆಸ್ಪತ್ರೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಬೈಕಿನ ಹಿಂದಿನಿಂದ ಬರುತ್ತಿದ್ದ ಟೆಂಪೋ ಟ್ರಾವೆಲರ್ ತೀರ್ಥಹಳ್ಳಿಯ ಡಿ.ಕೆ. ಇಬ್ರಾಹಿಂ ಎಂಬವರಿಗೆ ಸೇರಿದ್ದಾಗಿದ್ದು ಅದಕ್ಕೂ ಹಾನಿಯಾಗಿತ್ತು. ಆಗಿನ ಸಿಐ ಶ್ರೀಕಾಂತ್ ಕೆ ಅವರು ಈ ಪ್ರಕರಣದ ತನಿಖೆಯನ್ನು ಮಾಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ಮೇಲಿನ ಅಪರಾಧ ಸಾಬೀತಾಗಿದೆ ಎಂದು ನಿರ್ಧರಿಸಿ ಶಿಕ್ಷೆ ವಿಧಿಸಿದೆ. ಸರಕಾರದ ಪರವಾಗಿ ಮಮ್ತಾಜ್ ವಾದ ಮಂಡಿಸಿದ್ದರು.