ಮಂಗಳೂರು, ಫೆ 19 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ 2019ರ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಸಾಕ್ಷಿಗಳ ವಿಚಾರಣೆ ನಡೆಸಿದರು.
ಈ ವಿಚಾರಣೆಯಲ್ಲಿ ಮಾಜಿ ಮೇಯರ್ ಕೆ.ಅಶ್ರಫ್ ಮಾತ್ರ ಸಾಕ್ಷಿ ಹೇಳಿದ್ದಾರೆ. ಫೆ. ೨೫ ರಂದು ಪೊಲೀಸರು ಸಾಕ್ಷಿ ಹೇಳಲು ನೋಟಿಸ್ ಜಾರಿಗೊಳಿಸಲಾಗುತ್ತದೆ. ಒಟ್ಟು 176 ಪೊಲೀಸರು ಸಾಕ್ಷಿ ಹೇಳಲು ಸಿದ್ದರಿದ್ದಾರೆ ಎಂದು ನೋಡಲ್ ಅಧಿಕಾರಿಯೂ ಆಗಿರುವ ಎಸಿಪಿ ಬೆಳ್ಳಿಯಪ್ಪ ಪಟ್ಟಿ ನೀಡಿದ್ದಾರೆ.
ಫೆ.25 ರಂದು 12 ಮಂದಿ ಪೊಲೀಸ್ ಅಧಿಕಾರಿಗಳಿಗೆ ಹೇಳಿಕೆ ನೀಡಲು ಅವಕಾಶ ನೀಡಲಾಗುತ್ತದೆ. ಉಳಿದ ಪೊಲೀಸ್ ಅಧಿಕಾರಿಗಳಿಗೆ ಹಂತಹಂತವಾಗಿ ಸಾಕ್ಷಿ ನೀಡಲು ದಿನ ನಿಗದಿ ಮಾಡಲಾಗುತ್ತದೆ. ಅಷ್ಟು ಮಾತ್ರವಲ್ಲದೇ ಖುದ್ದು ಹಾಜರಾಗುವಂತೆ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ (ಕಾನೂನು ಹಾಗೂ ಸುವ್ಯವಸ್ಥೆ) ಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಗದೀಶ್ ತಿಳಿಸಿದ್ದಾರೆ.