ಮಂಗಳೂರು, ಫೆ 18 (DaijiworldNews/SM): ಮಂಗಳೂರು ಮಹಾನಗರ ಪಾಲಿಕೆಯಿಂದ ಅಂಗಡಿಗಳನ್ನು ಟೆಂಡರ್ ಮೂಲಕ ಪಡೆದು ಬಾಡಿಗೆ ನಿರ್ವಹಿಸುತ್ತಿರುವ ಅಂಗಡಿ ಮಾಲಕರು ನಗರ ಪಾಲಿಕೆಗೆ ಪಾವತಿಸಬೇಕಾದ ಬಾಡಿಗೆಯನ್ನು ನೀಡದಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪಾಲಿಕೆಯ ಕಂದಾಯ ಅಧಿಕಾರಿಗಳು ಬುಧವಾರದಂದು ಮಂಗಳೂರು ಕೇಂದ್ರ ಮಾರುಕಟ್ಟೆಯಲ್ಲಿರುವ ನಾಲ್ಕು ಅಂಗಡಿಗಳಿಗೆ ಬೀಗ ಜಡಿದಿದ್ದಾರೆ.
ಕಂದಾಯ ಅಧಿಕಾರಿಗಳ ತಂಡ ಬುಧವಾರ ಬೆಳಿಗ್ಗೆ ಕೇಂದ್ರ ಮಾರುಕಟ್ಟೆಗೆ ದಾಳಿ ನಡೆಸಿ ಬಾಡಿಗೆ ವಹಿಸಿರುವ ಅಂಗಡಿಗಳ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಮೀನು ವ್ಯಾಪಾರಕ್ಕೆ ಅಂಗಡಿಯನ್ನು ವಹಿಸಿರುವ ಒಂದು ಅಂಗಡಿ ಮಾಲಕರು ಮತ್ತು ಮೂರು ತರಕಾರಿ ಮಾರುಕಟ್ಟೆಯ ಅಂಗಡಿ ಮಾಲಕರು ಬಾಡಿಗೆಯನ್ನು ಪಾವತಿಸದಿರುವುದು ಬೆಳಕಿಗೆ ಬಂದಿದೆ.
ಸುಮಾರು 5 ಲಕ್ಷಕ್ಕೂ ಅಧಿಕ ಬಾಡಿಗೆಯನ್ನು ಪಾವತಿಸದೆ ಹಲವು ತಿಂಗಳುಗಳಿಂದ ಇವರು ವಂಚನೆ ನಡೆಸಿದ್ದಾರೆ ಎಂದು ನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕೂ ಅಂಗಡಿಗಳಿಗೆ ಬೀಗ ಜಡಿದ ಅಧಿಕಾರಿಗಳು ಅದಕ್ಕೆ ಮೊಹರು ಹಾಕಿ ಬಾಡಿಗೆಯನ್ನು ಪಾವತಿಸುವಂತೆ ಎಚ್ಚರಿಕೆ ಫಲಕ ಅಳವಡಿಸಿದ್ದಾರೆ.