ಉಡುಪಿ, ಫೆ 20 (Daijiworld News/MB) : ಉಡುಪಿ ಪೇಜಾವರ ಮಠದಿಂದ ರಾಮಮಂದಿರ ನಿರ್ಮಾಣಕ್ಕೆ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಥಮ ಸಭೆಯಲ್ಲಿ ಐದು ಲಕ್ಷ ರೂ. ಆರಂಭಿಕ ದೇಣಿಗೆ ನೀಡಲಾಗಿದೆ.
ದೆಹಲಿಯಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಪಾಲ್ಗೊಂಡ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥರು, "ಟ್ರಸ್ಟ್ ಸಭೆಯಲ್ಲಿ ರಾಮ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲರನ್ನೂ ಸ್ಮರಣೆ ಮಾಡಲಾಗಿದೆ. ಈ ಸಭೆಗೆ ಅವಕಾಶ ನೀಡಿದ ಸರ್ವೋಚ್ಛ ನ್ಯಾಯಾಲಯಕ್ಕೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಪೇಜಾವರ ಮಠದ ವತಿಯಿಂದ ರಾಮಮಂದಿರ ನಿರ್ಮಾಣಕ್ಕೆ ಐದು ಲಕ್ಷ ರೂ.ಯ ಮೊದಲ ದೇಣಿಗೆಯನ್ನು ವಿಶ್ವೇಶತೀರ್ಥ ಸ್ವಾಮೀಜಿ ಹೆಸರಲ್ಲಿ ನೀಡಿದ್ದೇವೆ. ಟ್ರಸ್ಟ್ ಸದಸ್ಯರಿಗೆ ಉಡುಪಿ ಕೃಷ್ಣಮಠದ ಪ್ರಸಾದವನ್ನು ನೀಡಿದ್ದೇವೆ" ಎಂದು ತಿಳಿಸಿದರು.
"ಸಾರ್ವಜನಿಕರು ಮಂದಿರ ನಿರ್ಮಾಣ ಮಾಡಲು ದೇಣಿಗೆ ನೀಡುವ ಅವಕಾಶವಿದೆ. ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ರಾಮ ಮಂದಿರ ಶಾಸ್ತ್ರೋಕ್ತವಾಗಿ ನಿರ್ಮಾಣವಾಗಬೇಕೆಂಬ ತೀರ್ಮಾನ ಕೈಗೊಳ್ಳಲಾಗಿದೆ. ದೇಶಾದ್ಯಂತ ದೇಗುಲ, ಮನೆಗಳಲ್ಲಿ ರಾಮಜಪ ಪಾರಾಯಣಕ್ಕೆ ತೀರ್ಮಾನಿಸಿದ್ದು, ಮಂದಿರ ನಿರ್ಮಾಣದವರೆಗೆ ದೇಶಾದ್ಯಂತ ರಾಮಾಯಣ ಪಾರಾಯಣ ನಡೆಯಲಿದೆ" ಎಂದರು.
"ಮಂದಿರ ನಿರ್ಮಾಣಕ್ಕಾಗಿ ವಿಶೇಷ ಸಮಿತಿಯನ್ನು ರಚನೆ ಮಾಡಲು ತೀರ್ಮಾನ ಮಾಡಲಾಗಿದೆ. ಮುಂದಿನ ಸಭೆ, ಅಲ್ಲಿ ನಡೆಯಬೇಕಾದ ಚರ್ಚೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.