Karavali
ಮಂಗಳೂರು: 'ಚರ್ಚ್ ದಾಳಿಗೆ ಕ್ಷಮೆಯಾಚಿಸಲ್ಲ, ಆದರೆ ಜೀಸಸ್ನನ್ನು ಪ್ರೀತಿಸುತ್ತೇನೆ' - ಮಹೇಂದ್ರ ಕುಮಾರ್
- Thu, Feb 20 2020 12:53:55 PM
-
ಮಂಗಳೂರು, ಫೆ 20 (Daijiworld News/MB) : ಮಹೇಂದ್ರ ಕುಮಾರ್ ಅವರು ರಾಜ್ಯದ ಬಜರಂಗದಳದ ಮಾಜಿ ಮುಖಂಡರು. ಇವರು 2008 ರಲ್ಲಿ ನಡೆದ ಚರ್ಚ್ ದಾಳಿಯಲ್ಲಿ ಭಾಗಿಯಾದವರು ಕೂಡಾ ಹೌದು. ಬಳಿಕ ಬಜರಂಗದಳದಿಂದ ಹೊರಬಂದು ಎಡ ಸಿದ್ಧಾಂತದತ್ತ ಮುಖ ಮಾಡಿದರು. ಹಾಗೆಯೇ ಬಲಪಂಥೀಯ ಸಂಘಟನೆಗಳನ್ನು ಬಹಿರಂಗವಾಗಿ ಟೀಕೆ ಮಾಡಲು ಆರಂಭಿಸಿದರು. ಅವರು ಜನಧ್ವನಿ ಚಳವಳಿಯ ಸ್ಥಾಪಕರು.
ದಾಯ್ಜಿವರ್ಲ್ಡ್ ಮುಖ್ಯ ಸಂಪಾದಕ ವಾಲ್ಟರ್ ನಂದಳಿಕೆಯವರು ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಹೇಂದ್ರ ಕುಮಾರ್ ಅವರು 2008 ರ ಚರ್ಚ್ ದಾಳಿ ಮತ್ತು ಸಿಎಎ ಮತ್ತು ಎನ್ಆರ್ಸಿ ಕುರಿತ ತಮ್ಮ ನಿಲುವುಗಳನ್ನು ಹಂಚಿಕೊಂಡಿದ್ದಾರೆ.
ಸಂದರ್ಶನದ ಕೆಲವು ಆಯ್ದ ಭಾಗಗಳು
ಪ್ರಶ್ನೆ: ನೀವು ಭಜರಂಗದಳದ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೀರಿ ಮತ್ತು ಹಲವಾರು ಬಲಪಂಥೀಯ ಸಂಘಟನೆಗಳೊಂದಿಗೆ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೀರಿ. 2008 ರಲ್ಲಿ ನಡೆದ ಚರ್ಚ್ ದಾಳಿಯ ಹಿಂದಿನ ಪ್ರಮುಖ ವ್ಯಕ್ತಿ ನೀವು ಎಂದು ಜನರು ನಿಮ್ಮನ್ನು ಗುರುತಿಸುತ್ತಾರೆ. ನೀವು ತೀವ್ರ ಬಲಪಂಥದಿಂದ ತೀವ್ರ ಎಡಪಂಥದೆಡೆಗೆ ಹೋಗಲು ಕಾರಣವೇನು?
ಉ: ನಾನು ಬಲಪಂಥೀಯ ಅಥವಾ ಎಡಪಂಥೀಯ ಅಲ್ಲ ಎಂದು ಜಗತ್ತಿಗೆ ಹಲವಾರು ಬಾರಿ ತಿಳಿಸಿದ್ದೇನೆ. ನಾನು ಎಂದಿಗೂ ಮಧ್ಯದಲ್ಲೇ ಇರುತ್ತೇನೆ. ಸಂಘ ಪರಿವಾರರೊಂದಿಗಿನ ನನ್ನ ದಿನಗಳಲ್ಲಿ, ನನ್ನ ಅಭಿಪ್ರಾಯಗಳು ಮತ್ತು ನಾನು ತೆಗೆದುಕೊಂಡ ನಿಲುವಿನಿಂದಾಗಿ, ನನ್ನನ್ನು ಹಿಂದೂವಾಗಿ ಕಾಣುವ ಎಡಪಂಥೀಯ ಎಂದು ಕರೆಯಲಾಯಿತು. ಯಾಕೆಂದರೆ ನಾನು ಶೋಷಿತರು ಹಾಗೂ ಧಮನಿತರ ಪರವಾಗಿ ಧ್ವನಿ ಎತ್ತಿದೆ. ಅದೇ ಕಾರಣದಿಂದಾಗಿ ನನಗೆ ಆರ್ಎಸ್ಎಸ್ನೊಂದಿಗೆ ಘರ್ಷಣೆ ಉಂಟಾಯಿತು. ಕರ್ನಾಟಕದಾದ್ಯಂತ ಬಜರಂಗದಳವನ್ನು ತಳಮಟ್ಟದಿಂದ ಬೆಳೆಸಿದ ವ್ಯಕ್ತಿ ನಾನು. ಆ ಹಿನ್ನಲೆಯಲ್ಲಿ ಆರ್ಎಸ್ಎಸ್ ನಾಯಕರು ನನ್ನನ್ನು ಬಿಜೆಪಿಯ ಪ್ರಮುಖ ಹುದ್ದೆಗೆ ಪರಿಗಣಿಸಲು ಒತ್ತಾಯ ಮಾಡಿದ್ದಾರೆ.
2008 ರ ಚರ್ಚ್ ದಾಳಿಯ ಸಂದರ್ಭದ ಅನೇಕ ವಿಷಯಗಳನ್ನು ನಾನು ಬಹಿರಂಗಪಡಿಸಬೇಕು. ಚರ್ಚ್ ದಾಳಿಗೆ ಸಂಬಂಧಿಸಿದಂತೆ, ನಾನು ಎಂದಿಗೂ ಟಿವಿ ಚಾನಲ್ಗಳ ಮುಂದೆ ಮಾತನಾಡಿಲ್ಲ. ಚರ್ಚ್ ದಾಳಿಯ ಕುರಿತಾಗಿ ಹಾಗೂ ಆ ದಾಳಿಯಲ್ಲಿ ನನ್ನ ಒಳಗೊಳ್ಳುವಿಕೆಯ ಸಂಪೂರ್ಣ ಚಿತ್ರಣದ ಕುರಿತಾಗಿ ನಾನು ಪುಸ್ತಕವನ್ನು ಬರೆಯಲು ಬಯಸುತ್ತೇನೆ.
ಪ್ರಶ್ನೆ: ಚರ್ಚ್ಗಳಲ್ಲಿ ಮತಾಂತರ ಮಾಡುತ್ತಾರೆ ಎಂದು ಆರೋಪಿಸಿ ಮಹೇಂದ್ರ ಕುಮಾರ್ ಚರ್ಚ್ ದಾಳಿ ಮಾಡಿದ್ದಾರೆ ಎಂಬ ಸಾಮಾನ್ಯ ಅಭಿಪ್ರಾಯವಿದೆ. ಆದರೆ ಚರ್ಚ್ ದಾಳಿಯ ಬಳಿಕ ಅವರೇ ಮತಾಂತರವಾಗಿದ್ದಾರೆ. ಇದು ಸರಿಯೇ?
ಉ: ನಾನು ಈಗಲೂ ಬಲವಂತದ ಧಾರ್ಮಿಕ ಮತಾಂತರಗಳನ್ನು ವಿರೋಧಿಸುತ್ತಿದ್ದೇನೆ. ಆದರೆ ನಾವು ಧರ್ಮದ ಹೆಸರಿನಲ್ಲಿ ಮತಾಂತರವನ್ನು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಕ್ರೈಸ್ತ ಸಮುದಾಯದಲ್ಲಿ ಕ್ಯಾಥೋಲಿಕರು ಮತಾಂತರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಅಥವಾ ಅದರ ಬಗ್ಗೆ ಅವರಿಗೆ ಆಸಕ್ತಿಯಿಲ್ಲ. ಪ್ರೊಟೆಸ್ಟೆಂಟ್ಗಳೂ ಹಾಗೆಯೇ. ಆದರೆ ಹಣದಲ್ಲಿ ಮನಸಿರುವ ಕೆಲವು ಗುಂಪುಗಳು ಇದೆ. ಅವರು ಬೈಬಲ್ ಬಗ್ಗೆ ಯಾವುದೇ ಮೂಲಭೂತ ಜ್ಞಾನವಿಲ್ಲದೆ, ಕ್ರಿಸ್ತನ ಬಗ್ಗೆ ಬೋಧಿಸುತ್ತಿದ್ದಾರೆ. ಇದು ಇತರ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ. ನಿಜವಾಗಿ ತೊಂದರೆ ಕೊಡುವವರು ಈ ಜನರು. ನನ್ನ ಪ್ರಕಾರ, ನಾನು ಯೇಸುವನ್ನು ನಂಬಿದರೆ, ನಾನು ಈಶ್ವರನನ್ನು ಅವಮಾನಿಸಬಾರದು. ನಾನು ಇತರ ಧರ್ಮಗಳ ಧಾರ್ಮಿಕ ಭಾವನೆಗಳನ್ನು ನೋಯಿಸಬಾರದು ಅಥವಾ ಅವರನ್ನು ಟೀಕಿಸಬಾರದು. ಇದು ನನ್ನ ನೀತಿ ಮತ್ತು ನಾನು ಇದನ್ನು ಅನುಸರಿಸುತ್ತೇನೆ.
2008 ರಲ್ಲಿ ನಡೆದ ಘಟನೆಗಳ ಹಿಂದೆ ಅನೇಕ ಕಾರಣಗಳಿವೆ. ಯೇಸು ನನ್ನ ನೆಚ್ಚಿನವರು ಹಾಗೂ ನಾನು ಅವರನ್ನು ಪ್ರೀತಿಸುತ್ತೇನೆ. ಮಿಲಾಗ್ರಿಸ್ನಲ್ಲಿ ಯೇಸುವಿನ ಪ್ರತಿಮೆಯನ್ನು ಮುರಿದ ದೃಶ್ಯ ನಾನು ಕಣ್ಣೀರು ಹಾಕುವಂತೆ ಮಾಡಿತು. ಯೇಸು ಮೂರ್ತಿ ಮುರಿದ ವಿಚಾರವಾಗಿ ನಾನು ಟಿವಿ ಚಾನೆಲ್ಗಳ ಬಹಿರಂಗವಾಗಿ ವಿಷಾದವನ್ನು ತಿಳಿಸಿದ್ದೇನೆ.
ಪ್ರಶ್ನೆ: ಪ್ರತಿಯೊಂದು ಧರ್ಮದಲ್ಲೂ ಮತಾಂಧರಿದ್ದಾರೆ ಎಂದು ನೀವು ಭಾವಿಸುತ್ತೀರಾ?
ಉ: ಹೌದು. ಪ್ರತಿ ಧರ್ಮದಲ್ಲೂ ಮತಾಂಧರಿದ್ದಾರೆ. ಯಾವುದೇ ಧರ್ಮವು ದ್ವೇಷವನ್ನು ಬೋಧಿಸುತ್ತಿಲ್ಲ. ಆದರೆ ಧರ್ಮದ ಬಗ್ಗೆ ತಿಳುವಳಿಕೆ ಇಲ್ಲದೆ ತಮ್ಮನ್ನು ತಾವು ಧರ್ಮದ ರಕ್ಷಕರಾಗಿ ಬಿಂಬಿಸಿಕೊಳ್ಳುವ ಕೆಲವು ಜನರು ಈ ಸಮಾಜದಲ್ಲಿ ತೊ೦ದರೆ ಉಂಟು ಮಾಡುವವರು.
ಪ್ರಶ್ನೆ: 2008 ರ ಘಟನೆ ನಿಮ್ಮ ಜೀವನದಲ್ಲಿ ಮಹತ್ವದ ತಿರುವು ನೀಡಿದೆಯೇ?
ಉ: ಹೌದು. 2008 ರ ಘಟನೆಯು ನನ್ನನ್ನು ಯೋಚಿಸುವಂತೆ ಮಾಡಿತು ಮತ್ತು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ನನ್ನನ್ನು ಪ್ರೇರೇಪಿಸಿತು. ನಾನು ಭಜರಂಗದಳದಲ್ಲಿಯೇ ಇದಿದ್ದರೆ ಇಂದು ಸಂಸದ ಅಥವಾ ಶಾಸಕನಾಗಬಹುದಿತ್ತು ಎಂದು ಹಲವರು ಹೇಳುತ್ತಾರೆ. ಆದರೆ ನಾನು ಈ ಯಾವುದೇ ಹುದ್ದೆಗಳ ಆಕಾಂಕ್ಷಿಯಲ್ಲ. ಸ್ಥಾನವು ಬರುತ್ತದೆ ಮತ್ತು ಹೋಗುತ್ತದೆ ಆದರೆ ಜನರ ಹೃದಯದಲ್ಲಿ ಜಾಗವನ್ನು ನಿರ್ಮಿಸುವುದು ಬಹಳ ಮುಖ್ಯ. ಗಾಂಧೀಜಿಯವರು ಅದೇ ರೀತಿ ಮಾಡಿದರು. ಅವರು ಸಚಿವರಾಗಲಿಲ್ಲ ಅಥವಾ ಯಾವುದೇ ಹುದ್ದೆಗಳನ್ನು ನಿರ್ವಹಿಸಲಿಲ್ಲ.
ನನ್ನ ವಿಚಾರದಲ್ಲಿ ಚರ್ಚ್ ದಾಳಿಯ ನಂತರ, ನನ್ನನ್ನು ಜೈಲಿನಿಂದ ಹೊರಗೆ ತರಲು ಆರ್ಎಸ್ಎಸ್ ಯಾವುದೇ ಆಸಕ್ತಿ ಹೊಂದಿರಲಿಲ್ಲ. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ನಾನು ಅವರ ರಾಜಕೀಯ ಬೂಟಾಟಿಕೆ ಬಗ್ಗೆ ಆರ್ಎಸ್ಎಸ್ ಮತ್ತು ಬಿಜೆಪಿಯೊಂದಿಗೆ ಘರ್ಷಣೆ ನಡೆಸಿದ್ದೆ. ಅದೇ ಸಮಯದಲ್ಲಿ ದತ್ತಾ ಪೀಠ ಸಮಸ್ಯೆ ಬಂದ ಕಾರಣ ಅವರು ನನ್ನನ್ನು ಕೆಲವು ದಿನಗಳ ಕಾಲ ಜೈಲಿನಲ್ಲೇ ಇರಿಸಲು ಬಯಸಿದ್ದರು. ನಾನು ಜೈಲಿನಿಂದ ಹೊರ ಬಂದಲ್ಲಿ ದತ್ತ ಮಾಲಾ ಅಭಿಯಾನದ ಸದಸ್ಯರನ್ನು ಸೇರುತ್ತೇನೆ ಎಂದು ಸರ್ಕಾರ ಹಾಗೂ ಬಿಜೆಪಿ ತಿಳಿದಿತ್ತು. ಹಾಗಾಗಿ ಯಡಿಯೂರಪ್ಪ ಮತ್ತು ಬಿಜೆಪಿ ಇನ್ನೂ ಕೆಲವು ದಿನಗಳ ಕಾಲ ನನ್ನನ್ನು ಜೈಲಿನಲ್ಲಿಡಲು ಬಯಸಿದ್ದರು.
ಪ್ರಶ್ನೆ: 2008 ರಲ್ಲಿ ನಿಮ್ಮ ಜೈಲು ವಾಸವು ಯಾರು ಸರಿ ಮತ್ತು ಯಾರು ತಪ್ಪು ಎಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನೀವು ಭಾವಿಸಿದ್ದೀರಾ?
ಉ: ನಾನು ಈಗಾಗಲೇ ಹೇಳಿದ್ದೇನೆ, ಆರ್ಎಸ್ಎಸ್ ಮತ್ತು ಬಿಜೆಪಿಯ ನಾಯಕರೊಂದಿಗೆ ನನಗೆ ನಿರಂತರವಾಗಿ ಘರ್ಷಣೆ ನಡೆದಿತ್ತು. ಜೈಲು ವಾಸವು ಹಿಂದೂ ಸಂಘಟನೆಗಳ ಕ್ರಮಗಳ ವಿರುದ್ಧ ನಾನು ನಿಲ್ಲಲು ಕಾರಣವಾಯಿತು. ಕೋಮು ಸಂಘರ್ಷದಿಂದಾಗಿ ಜೈಲು ಪಾಲಾದ ಕೈದಿಗಳ ಜೀವನವು ನಾನು ಎರಡು ಬಾರಿ ಯೋಚಿಸುವಂತೆ ಮಾಡಿತು. ಅವರೆಲ್ಲರನ್ನೂ ಅವರ ಮುಖಂಡರು ಮೂರ್ಖರನ್ನಾಗಿಸಿದ್ದಾರೆ. ಅವರು ದ್ವೇಷದ ಭಾಷಣಗಳು ಮತ್ತು ಸಭೆಗಳಿಂದ ಪ್ರಚೋಧನೆಗೊಂಡು ಅಪರಾಧ ಮಾಡುತ್ತಾರೆ. ಆದರೆ ಒಂದು ಬಾರಿ ಅವರು ಜೈಲಿಗೆ ಬಂದ ನಂತರ ಅವರು ಅಸಹಾಯಕರಾಗುತ್ತಾರೆ ಹಾಗೂ ಶಿಕ್ಷೆಯನ್ನು ಒಬ್ಬಂಟಿಯಾಗಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದು ನನಗೆ ನೋವುಂಟು ಮಾಡಿತು ಹಾಗೂ ಅದಕ್ಕೆ ಕಾರಣವಾಗಿರುವ ನಾಯಕನಾಗಿ ನನ್ನ ಕೆಲಸವನ್ನು ಪುನರ್ ವಿಮರ್ಶಿಸಲು ಕಾರಣವಾಯಿತು.
ಜಾಮೀನು ಪಡೆದ ಕೆಲವೇ ದಿನಗಳಲ್ಲಿ, ನನ್ನ ಸ್ನೇಹಿತರೊಬ್ಬರನ್ನು ಭೇಟಿ ಮಾಡಲು ಬೆಳ್ತಂಗಡಿಗೆ ಹೋದೆ. ಅಲ್ಲಿ ಹಿಂದೂ ಆದರೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಓರ್ವ ಮಹಿಳೆಯನ್ನು ಭೇಟಿಯಾದೆ. ಅವರ ಜೀವನ ಕಥೆ ನನ್ನ ಜೀವನದಲ್ಲಿ ಸಂಪೂರ್ಣವಾಗಿ ಬದಲಾವಣೆಯನ್ನು ತಂದಿತು. ಅವರ ಆ ಜೀವನವು ಹಿಂದೂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ವರ್ಗ ವ್ಯವಸ್ಥೆ, ಕ್ರೈಸ್ತರು, ಮತಾಂತರ ಬಗ್ಗೆ ಕಣ್ಣು ತೆರೆಸಿತು. ಹಿಂದೂ ಸಮುದಾಯವನ್ನು ಪೂರ್ಣವಾಗಿ ಬ್ರಾಹ್ಮಣರು ನಿಯಂತ್ರಿಸುತ್ತಾರೆ. ಹಿಂದೂ ಸಂಘಟನೆ, ಆರ್ಎಸ್ಎಸ್ ಅಥವಾ ಬಿಜೆಪಿಯಲ್ಲಿ ಇತರ ಸಮುದಾಯಗಳ ಮುಖಂಡರಿಗೆ ಅಧಿಕಾರ ದೊರೆಯುವುದಿಲ್ಲ ಹಾಗೂ ಸ್ವಾತಂತ್ರ್ಯವಿರುವುದಿಲ್ಲ. ಎಲ್ಲರೂ ಬ್ರಾಹ್ಮಣವಾದದ ಎದುರು ಶೂನ್ಯ.
ಪ್ರಶ್ನೆ: ನಿಮ್ಮ ಅಭಿಪ್ರಾಯದಲ್ಲಿ ಬಿಜೆಪಿಯಲ್ಲಿ ಯಾರು ಶಕ್ತಿಹೀನರು?
ಉ: ನಳಿನ್ ಕುಮಾರ್ ಕಟೀಲ್ ಬಿಜೆಪಿಯಲ್ಲಿ ಜೀರೋ. ಅವರು ಪಕ್ಷದಲ್ಲಿ ಕೇವಲ ಒಂದು ಸಾಧನ. ಎಲ್ಲವನ್ನೂ ಆರ್ಎಸ್ಎಸ್ ಮತ್ತು ಕೆಲವು ಮೇಲ್ಜಾತಿಯ ಮುಖಂಡರು ನಿರ್ಧರಿಸುತ್ತಾರೆ. ನಳಿನ್ ಕುಮಾರ್ ಅವರಿಗೆ ಬಿಜೆಪಿಯಲ್ಲಿ ಯಾವುದೇ ಹಿಡಿತವಿಲ್ಲ ಎಂದು ದಕ್ಷಿಣ ಕನ್ನಡದಲ್ಲಿರುವ ಎಲ್ಲರಿಗೂ ತಿಳಿದಿದೆ. ಕೋಟಾ ಶ್ರೀನಿವಾಸ್ ಪೂಜಾರಿಯವರಿಗೂ ಇದೇ ವಿಧಿಯಾಗಿದೆ. ಆದರೆ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಮಾತ್ರ ಆರ್ಎಸ್ಎಸ್ನ ಯಾವುದೇ ಬೆಂಬಲವಿಲ್ಲದೆ ನಾಯಕನಾಗಿ ಹೆಸರು ಮಾಡಿದ್ದಾರೆ. ವಿನಯ್ ಶೆಟ್ಟಿ, ಸುದರ್ಶನ್ ಮೂಡುಬಿದಿರೆ ಹಾಗೂ ಸತ್ಯಜೀತ್ ಸುರತ್ಕಲ್ ಅವರು ಬಿಜೆಪಿಯಲ್ಲಿ ಸಮರ್ಥ ನಾಯಕರು. ಆದರೆ ಅವರು ನಾಯಕತ್ವ ವಹಿಸುವುದನ್ನು ಆರ್ಎಸ್ಎಸ್ ಬಯಸುವುದಿಲ್ಲ.
ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ, ಎಲ್ಲೆಡೆ ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳು ಮತ್ತು ರ್ಯಾಲಿಗಳಿಗೆ ನೀವು ಬೇಡಿಕೆಯ ವ್ಯಕ್ತಿ. ಸಿಎಎ ಮತ್ತು ಎನ್ಆರ್ಸಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉ: ನಾನು ಸಿಎಎಯನ್ನು ವಿರೋಧಿಸುತ್ತಿಲ್ಲ. ನಾನು ಎನ್ಆರ್ಸಿಯನ್ನು ವಿರೋಧಿಸುತ್ತೇನೆ. ಎನ್ಆರ್ಸಿ ಇಲ್ಲದೆ ಸರ್ಕಾರ ಸಿಎಎ ಜಾರಿಗೆ ತರಲು ಸಾಧ್ಯವಿಲ್ಲ. ಎನ್ಆರ್ಸಿ ಮೂಲಕ ಇಡೀ ರಾಷ್ಟ್ರದ ಜನರನ್ನು ಪ್ರತ್ಯೇಕಿಸಲು ಸರ್ಕಾರ ಯೋಜಿಸುತ್ತಿದೆ. ಇದನ್ನು ನಾನು ವಿರೋಧಿಸುತ್ತಿದ್ದೇನೆ. ಭಾರತೀಯ ನಾಗರಿಕರಿಂದ ದಾಖಲೆಗಳನ್ನು ಕೇಳುವ ಬದಲಾಗಿ ಪೊಲೀಸ್ ಇಲಾಖೆ ಮತ್ತು ಗುಪ್ತಚರರು ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಹೊರಗೆ ಕಳುಹಿಸಬೇಕು.
ಈ ಬಗ್ಗೆ ಸರ್ಕಾರಕ್ಕೆ ಯಾವುದೇ ಗಂಭೀರತೆ ಇಲ್ಲ. ಅವರು ರಾಷ್ಟ್ರದ ಜನರನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಸಿಎಎ ಮತ್ತು ಎನ್ಆರ್ಸಿ ಬದಲಿಗೆ, ಸರ್ಕಾರವು ನಮ್ಮ ರಾಷ್ಟ್ರದ ಸಮಸ್ಯೆಗಳನ್ನು ಸರಿಪಡಿಸುವ ಅಗತ್ಯವಿದೆ.
ಪ್ರಶ್ನೆ: ಚರ್ಚ್ ದಾಳಿಗೆ ಕ್ರೈಸ್ತರು ನಿಮ್ಮನ್ನು ಕ್ಷಮಿಸಿದ್ದಾರೆಂದು ನೀವು ಭಾವಿಸುತ್ತೀರಾ? ಚರ್ಚ್ ದಾಳಿಯ ಬಗ್ಗೆ ನಿಮಗೆ ಏನಾದರೂ ವಿಷಾದವಿದೆಯೇ?
ಉ: ಕ್ರೈಸ್ತರು ನನ್ನನ್ನು ಕ್ಷಮಿಸಿದ್ದಾರೋ ಇಲ್ಲವೋ ಎಂದು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೂ, ಇತರ ಜನರ ಧಾರ್ಮಿಕ ಭಾವನೆಳಿಗೆ ಅವಮಾನ ಮಾಡುವುದನ್ನು ನಾನು ವಿರೋಧಿಸುತ್ತೇನೆ. ಆದರೆ ನಾನು ಕ್ರಿಸ್ತನನ್ನು ಪ್ರೀತಿಸುತ್ತೇನೆ ಮತ್ತು ನಾನು ನೇರವಾಗಿ ಅವನಲ್ಲಿ ಪ್ರಾರ್ಥಿಸುತ್ತೇನೆ. ಮದರ್ ಥೆರೆಸಾ ಅವರ ಮೇಲೆ ನನಗೆ ಅಪಾರ ಗೌರವವಿದೆ. ಗಾಂಧಿ, ಜೀಸಸ್ ಮತ್ತು ಮದರ್ ಥೆರೆಸಾ ಪ್ರಕಾರವಾಗಿ ಈ ಸಮಾಜವನ್ನು ಬದಲಾಯಿಸುವ ಉದ್ದೇಶದಿಂದ ನಾನು ಬದುಕುತ್ತಿದ್ದೇನೆ, ನನ್ನ ಹೋರಾಟವನ್ನು ಮುಂದುವರಿಸುತ್ತೇನೆ.