ಮಂಗಳೂರು: ಫೆ 20 (DaijiworldNews/SM): ಸಿಎಎಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಅಮೂಲ್ಯ ಲಿಯೋನ್ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರೋದನ್ನು ಖಂಡಿಸಿ ಇಂದು ಲಾಲ್ ಬಾಗ್ ನಲ್ಲಿರುವ ಮನಪಾ ಮುಂಭಾಗ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಅಮೂಲ್ಯ ಲಿಯೋನ್ ನ ಭಾವಚಿತ್ರವನ್ನು ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿ ಮಾತನಾಡಿದ ಎಬಿವಿಪಿ ನಗರ ಕಾರ್ಯದರ್ಶಿ ಮಣಿಕಂಠ, ಬೆಂಗಳೂರಿನಲ್ಲಿ ನಡೆದಿದ್ದ ಸಿಎಎ ವಿರೋಧಿ ಕಾರ್ಯಕ್ರಮದಲ್ಲಿ ಅಮೂಲ್ಯ ಲಿಯೋನ್ ನ ನಿಜ ಬಣ್ಣ ಬಯಲಾಗಿದೆ. ನಾವು ಹಿಂದೂಸ್ತಾನದ ಪರವಾಗಿ ದೇಶಕ್ಕೋಸ್ಕರ ಪ್ರಾಣ ತ್ಯಾಗಕ್ಕೂ ಸಿದ್ದರಿದ್ದೇವೆ. ಆದರೆ ಆಕೆ ಸಿಎಎ ವಿರೋಧವಾಗಿ ಮಾತನಾಡಿ, ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುತ್ತಾಳೆ. ಇದರಿಂದ ಆಕೆಯ ನಿಜ ಬಣ್ಣ ಬಯಲಾಗಿದೆ. ನಮ್ಮ ನೆಲದಲ್ಲೇ ಹುಟ್ಟಿ ಬೆಳೆದು ದೇಶದಲ್ಲಿನ ಗಾಳಿಯನ್ನು ಉಸಿರಾಡುತ್ತಿರುವಾಗಲೇ ನಮ್ಮ ವಿರೋಧಿ ದೇಶ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವ ಮೂಲಕ ಆಕೆ ದೇಶದ್ರೋಹ ಎಸಗಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವೇ ದಿನಗಳ ಹಿಂದೆ ಇದೇ ಅಮೂಲ್ಯ ವಿಮಾನ ನಿಲ್ದಾಣದಲ್ಲಿ ದೇಶಭಕ್ತರೋರ್ವನನ್ನು 'ನೀವು ವಂದೇ ಮಾತರಂ, ನಮ್ಮೆದುರಿಗೆ ಹಾಡಿ ತೋರಿಸಿ' ಎಂದು ಪ್ರಶ್ನಿಸಿದ್ದಳು. ಇದರಿಂದ ಕೆಲವರು ಆಕೆಯನ್ನು ದೇಶಭಕ್ತೆ, ಕೇಂದ್ರ ಸರಕಾರದ ಸಿಎಎಯ ವಿರೋಧವಾಗಿ ಮಾತನಾಡುತ್ತಿದ್ದಾಳೆ ಎಂದು ವೈಭವೀಕರಿಸಿದ್ದರು. ಆದರೆ ಆಕೆಗೆ ವಂದೇ ಮಾತರಂ ಗೀತೆಯ ಬಗ್ಗೆ ಭಕ್ತಿ ಇದ್ದಿದ್ದರೆ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುತ್ತಿರಲಿಲ್ಲ ಎಂದು ಕಿಡಿಖಾರಿದ್ದಾರೆ.
ಇದೇ ರೀತಿ ಸಿಎಎಯನ್ನು ವಿರೋಧಿಸುವವರ ಮುಖವಾಡ ಕಳಚುವ ದಿನ ಆದಷ್ಟು ಬೇಗ ಬರಲಿದೆ. ಎಬಿವಿಪಿ ಈ ರೀತಿಯಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವವರನ್ನು ಖಂಡಿಸುತ್ತದೆ. ಇದಕ್ಕಾಗಿ ರಾತ್ರೋರಾತ್ರಿ ಹೋರಾಟ ಮಾಡುತ್ತದೆ. ಅಮೂಲ್ಯ ಲಿಯೋನ್ ಗೆ ಕಠಿಣ ಶಿಕ್ಷೆಯಾಗಬೇಕು. ಈ ಮೂಲಕ ಭಾರತದಲ್ಲಿ ನಿಂತು ಪಾಕಿಸ್ತಾನದ ಹೆಸರನ್ನು ನನ್ನ ಬಾಯಲ್ಲಿ ಹೇಳುತ್ತೇನೆಂಬ ಯೋಚನೆಯನ್ನು ಕೂಡಾ ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ.