ಉಡುಪಿ, ಫೆ.21 (DaijiworldNews/PY) : ಡಿಕೆಶಿ ಒರಿಜಿನಲ್ ಕಾಂಗ್ರೆಸ್ಸಿಗ ಅಲ್ಲ. ನಿಜವಾದ ಕಾಂಗ್ರೆಸ್ಸಿಗರಾಗಿದ್ದರೆ ಈ ಹೇಳಿಕೆ ನೀಡುತ್ತಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪಕ್ಷ ಕಾಂಗ್ರೆಸ್ ಎನುತ್ತಾರೆ. ಹೇಳಿಕೆ ನೀಡಿದ ಡಿಕೆಶಿ ವಿಚಾರವಾಗಿಯೂ ತನಿಖೆಯಾಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ವಿರೋಧಿ ಘೋಷಣೆ ಕೂಗುವ ಜಾಲ ನಿರ್ಮಾಣ ಆಗಿದೆ. ಪಾಕ್ ಪರ ಘೋಷಣೆ ಕೂಗುವವರಿಗೆ ಉಗ್ರ ಶಿಕ್ಷೆ ಆಗಬೇಕು. ಭಾರತ ಮತ್ತು ರಾಜ್ಯದ ಕಾನೂನಲ್ಲಿ ಬದಲಾವಣೆ ಆಗಬೇಕು ಎಂದು ತಿಳಿಸಿದರು.
ಭಾರತದ ಅನ್ನ ತಿಂದು, ಸಬ್ಸಿಡಿ ಪಡೆದು ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಇದರ ಹಿಂದೆ ಇರುವ ವ್ಯಕ್ತಿಗಳ ತನಿಖೆ ಆಗಬೇಕು. ಆಯೋಜಕರ ತನಿಖೆಯೂ ಆಗಬೇಕು. ಘೋಷಣೆ ಕೂಗಿದ ಅಮೂಲ್ಯ ತಂದೆ ಬಗ್ಗೆ ತನಿಖೆಯಾಗಬೇಕು ಎಂದರು.
ಏಕೆಂದರೆ ಅವರು ಕೊಪ್ಪದವರು, ಹಿಂದೆ ನಕ್ಸಲರ ಜೊತೆ ಸಂಪರ್ಕ ಇತ್ತು. ಈ ವಿಚಾರವಾಗಿ ಪೊಲೀಸರಿಗೆ ಮಾಹಿತಿ ಇದೆ. ಸಿರಿಮನೆ ನಾಗರಾಜು ಹಾಗೂ ನಕ್ಸಲ್ ಬೆಂಬಲಿಗರ ಒಡನಾಟ ಇದೆ. ಹೀಗಾಗಿ ಅಮೂಲ್ಯ ಅಪ್ಪನಿಗೆ ನಕ್ಸಲರ ಸಂಪರ್ಕ ಇದೆ ಎಂದರು.
ಇಂದು ಬೆಂಗಳೂರಿನ ಟೌನ್ಹಾಲ್ ಬಳಿ ಘೋಷಣೆ ಕೂಗಿದ ಹುಡುಗಿ ಯಾರು? ಅವಳ ಹಿನ್ನೆಲೆ ಏನು? ಈಕೆಗೆ ಯಾವ ಸಂಘಟನೆಯ ಜೊತೆ ಸಂಬಂಧ ಇದೆ? ಈ ವಿಚಾರವಾಗಿ ತನಿಖೆಯಾಗಬೇಕು ಎಲ್ಲರನ್ನೂ ದೇಶ ದ್ರೋಹದ ಕೇಸಿನ ಮೇಲೆ ಜೈಲಿಗೆ ಹಾಕಬೇಕು. ಯಾವುದೇ ವಕೀಲರು ಕೇಸು ನಡೆಸಬಾರದು. ಹುಬ್ಬಳ್ಳಿ ಪ್ರಕರಣದಲ್ಲಿ ಬೆಂಗಳೂರಿನ ವಕೀಲರು ವಾದ ಮಾಡಲು ಹೋಗಿದ್ದಾರೆ. ರಾಷ್ಟ್ರಪ್ರೇಮದ ವಿಚಾರದಲ್ಲಿ ಯಾರು ರಾಜಿ ಆಗಬೇಡಿ. ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಆದರೆ ಭಾರತ ಮಾತೆಯ ವಿಚಾರವಾಗಿ ಅವಹೇಳನ ಮಾಡಿದವರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಹೇಳಿದರು.
ಅಮೂಲ್ಯಗೆ ಮಾತನಾಡಲು ಅವಕಾಶ ನೀಡಬೇಕಿತ್ತು ಎಂಬ ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಒರಿಜಿನಲ್ ಕಾಂಗ್ರೆಸ್ಸಿಗ ಅಲ್ಲ. ನಿಜವಾದ ಕಾಂಗ್ರೆಸ್ಸಿಗರಾಗಿದ್ದರೆ ಈ ಹೇಳಿಕೆ ನೀಡುತ್ತಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪಕ್ಷ ಕಾಂಗ್ರೆಸ್ ಎನುತ್ತಾರೆ. ಹೇಳಿಕೆ ನೀಡಿದ ಡಿಕೆಶಿ ವಿಚಾರವಾಗಿಯೂ ತನಿಖೆಯಾಗಬೇಕು. ಯುವಕರನ್ನು ಬ್ರೈನ್ ವಾಶ್ ಮಾಡುವವರು ಕುಮ್ಮಕ್ಕು ನೀಡುವವರು. ಹಣಕಾಸು ನೆರವು ನೀಡುವವರು ಇನ್ನೂ ಇದ್ದಾರೆ. ಅಂತಹ ಶಕ್ತಿ ಸಂಘಟನೆಯ ಬಗ್ಗೆ ತನಿಖೆಯಾಗಲಿ ಎಂದಿದ್ದಾರೆ.