ಮಂಗಳೂರು,ಫೆ 21 (DaijiworldNews/SM): ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಉದ್ದೇಶಿಸಲಾಗಿರುವ ೬೭ ಎಕರೆ ಪ್ರದೇಶವನ್ನು ಯೋಜನಾ ಬದ್ಧವಾಗಿ ವಿನಿಯೋಗಿಸಲಾಗುತ್ತಿದೆ. ಈ ಭಾಗದಲ್ಲಿ ಶತ ಶತಮಾನಗಳ ಕಾಲ ಉಳಿಯುವ ಸುಂದರ ಹಾಗೂ ಬಲಿಷ್ಠವಾದ ಮಂದಿರ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂದಿರ ನಿರ್ಮಾಣದ ಉದ್ದೇಶದಿಂದ ಈಗಾಲೇ ಕೆಲವೊಂದು ಕಲ್ಲಿನ ಕೆಲಸ ನಿರ್ವಹಿಸಲಾಗಿದೆ. ಅದನ್ನು ಸೇರಿದಂತೆ ನೀಲಿನಕ್ಷೆ ತಯಾರಿಸಲಾಗುವುದು. ಮಂದಿರಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ, ಪ್ರಾಚೀನಸಂಸ್ಕೃತಿ ಸಾರುವ ಕಲಾಭವನ ನಿರ್ಮಾಣಕ್ಕೂ ಉದ್ದೇಶಿಸಲಾಗಿದೆ.
ನಿರ್ಮಾಣ ಸಮಿತಿ ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಿದೆ. ಮುಂದಿನ ಬಾರಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ಮಂದಿರ ನಿರ್ಮಾಣ ಸಮಿತಿಯ ಜಂಟಿ ಸಭೆ ನಡೆಸಲು ಉದ್ದೇಶಿಸಲಾಗಿದ್ದು, ಈ ವೇಳೆ ಶಂಕುಸ್ಥಾಪನೆ ದಿನಾಂಕವನ್ನು ಗೊತ್ತುಪಡಿಸಲಾಗುವುದು ಎಂದು ಸ್ವಾಮೀಜಿ ವಿವರಿಸಿದರು.