ಹೆಜಮಾಡಿ, ಫೆ 10 : ಹೆಜಮಾಡಿ ಟೋಲ್ಗೇಟಿನ 5 ಕಿಲೋ ಮೀಟರ್ ವ್ಯಾಪ್ತಿಯ ಹೊರಗಿನ ಎಲ್ಲಾ ಕೆಎ 20 ನೋಂದಣಿಯ ಕಾರುಗಳಿಗೆ ಫೆ. 9 ರ ಶುಕ್ರವಾರದಿಂದ ಟೋಲ್ ವಸೂಲಿ ಆರಂಭ ಮಾಡಿರುವ ಕ್ರಮಕ್ಕೆ ಸ್ಥಳೀಯ ಆಟೋ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೋಲ್ಗೇಟ್ ಸಿಬ್ಬಂದಿ ಮತ್ತು ಟ್ಯಾಕ್ಸಿ ಚಾಲಕರ ನಡುವೆ ಹಲವು ಬಾರಿ ಮಾತಿನ ಚಕಮಕಿಯೂ ಶುಕ್ರವಾರ ನಡೆದಿರುವುದು ವರದಿಯಾಗಿದೆ. ಟ್ಯಾಕ್ಸಿ ಚಾಲಕ-ಮಾಲಕರ ಆಗ್ರಹಕ್ಕೆ ಮಣಿದು ಸಂಜೆ ವೇಳೆಗೆ ಸುಂಕ ಸಂಗ್ರಹವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಆದರೆ ಈ ಬಗ್ಗೆ ಟೋಲ್ಗೇಟ್ನ ಯಾವುದೇ ಅಧಿಕಾರಿಗಳು ಸ್ಪಷ್ಟನೆ ನೀಡಲು ನಿರಾಕರಿಸಿದ್ದಾರೆ. ಇಲ್ಲಿ ಕೆಲವೊಂದು ಸಿಬ್ಬಂದಿಗಳು ಕಾನೂನು ಬಾಹಿರವಾಗಿ ತಮ್ಮದೇ ನಿಯಮಗಳನ್ನು ಅಳವಡಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡಾ ಕೇಳಿ ಬಂದಿದೆ. ಆದರೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ವರದಿಯಾಗಿದೆ. ಇನ್ನು ಫೆ 12 ರ ಸೋಮವಾರದಿಂದ ಟೋಲ್ಗೇಟ್ ಸಿಬ್ಬಂದಿಗಳ ಕ್ರಮ ಖಂಡಿಸಿ ತಾವು ಪ್ರತಿಭಟನೆ ಮಾಡುವುದಾಗಿ ಇಲ್ಲಿನ ಆಟೋರಿಕ್ಷಾ ಚಾಲಕರ ಸಂಘಟನೆ ನಾಯಕರು ಹೇಳಿದ್ದಾರೆ.