ಕಾರ್ಕಳ, ಫೆ 21 (DaijiworldNews/SM): ಪೌರತ್ವ ಕಾನೂನು ಜಾರಿಗೊಳಿಸುವುದರಿಂದ ಈ ದೇಶದ ಯಾವುದೇ ಪ್ರಜೆಗಳ ಹಕ್ಕಿಗೆ ಭಾದಕವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡಿದರೂ, ಕಳೆದ ಒಂದುವರೆ ತಿಂಗಳುಗಳಿಂದ ಪೌರತ್ವ ಕಾನೂನು ಜಾರಿ ಹೆಸರಿನಲ್ಲಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳು ವಿವಿಧ ಆಯಾಮಗಳಲ್ಲಿ ಪ್ರತಿಭಟನೆ ಮಾಡುತ್ತಾ ಬಂದಿದೆ. ಇದರ ಹಿಂದೆ ಯಾವುದೋ ದುರುದ್ದೇಶ ಹೊಂದಿದೆ. ಆರಂಭದ ಹಂತದಲ್ಲಿ ದೇಶದ ಉದ್ದಗಲದಲ್ಲಿ ಭಾರೀ ಪ್ರಮಾಣದಲ್ಲಿ ಅಶಾಂತಿ ನಡೆದಿತ್ತು. ಅಪಾರ ಪ್ರಮಾಣದಲ್ಲಿ ಸೊತ್ತು ಹಾನಿಗೊಳಗಾಗಿತ್ತು. ಹಂತ ಹಂತವಾಗಿ ಹೋರಾಟದ ಕಿಚ್ಚು ತಣಿಯುತ್ತಿದ್ದಂತೆ ಬೆಂಗಳೂರಿನಲ್ಲಿ ಗುರುವಾರದಂದು ನಡೆದಿರುವ ಘಟನೆಯೊಂದರಿಂದ ನಿಜ ಸ್ವರೂಪವೇ ಬಯಲಾಗಿದೆ ಎಂದು ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಆರೋಪಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿ ಪ್ರತಿಭಟನಾ ಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಕಠಿಣ ಕ್ರಮ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದ ವಿಸ್ತೃತ ಬಸ್ ನಿಲ್ದಾಣ ಪರಿಸರದಲ್ಲಿ ಶುಕ್ರವಾರ ಸಂಜೆ ಭಾರತೀಯ ಯುವ ಮೋರ್ಚಾ ಆಯೋಜಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೇಶ ಸ್ವಾತಂತ್ರ್ಯ ಪಡೆದ ಬಳಿಕ ಬಹುವರ್ಷ ಕಾಂಗ್ರೆಸ್ ಆಳ್ವಿಕೆ ಅವಧಿಯಲ್ಲಿ ದೇಶ ದ್ರೋಹಿಗಳನ್ನು ಬೆಳೆಸಿದ ಪರಿಣಾಮವಾಗಿ ಬಹಿರಂಗ ಸಭೆಗಳಲ್ಲಿ ದೇಶದ್ರೋಹ ಘೋಷಣೆ ಕೂಗಲು ಕಾರಣವಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಭಾರತ-ಪಾಕಿಸ್ತಾನ ನಡುವೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ಸೋಲು ಕಂಡಾಗ ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಪಟಾಕಿ ಸಿಡಿಸಿ ಓಡಿ ಹೋಗುತಿದ್ದರು. ಸೋಶಿಯಲ್ ಮಿಡಿಯಾಗಳಲ್ಲಿ ಅನಾಮಧೇಯ ಹೆಸರಿನಲ್ಲಿ ದೇಶ ವಿರುದ್ಧ ಪೋಸ್ಟ್ಗಳನ್ನು ಹಾಕುತ್ತಿದ್ದರು. ಅವೆಲ್ಲದರ ಗೆರೆ ದಾಟಿ ಇವತ್ತು ಪಾಕಿಸ್ತಾನ ಪರ ಘೋಷಣೆ ಕೂಗಲು ಆರಂಭಿಸಿರುವುದು ನಾಗರಿಕ ಸಮಾಜ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಘಂಟಾಘೋಷವಾಗಿ ಹೇಳಿದರು.