ವಿಟ್ಲ, ಫೆ 21 (DaijiworldNews/SM): ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪುಣಚ ಗ್ರಾಮದ ನಿವಾಸಿ ಮನೋಹರ್ ಬಂಧಿತ ಆರೋಪಿಯಾಗಿದ್ದಾನೆ. ಈತ ಅದೇ ಗ್ರಾಮದ ೭ನೇ ತರಗತಿಯ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ.
ಈ ಗ್ರಾಮದ ಏಳನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಆರೋಪಿ ನಿರಂತರವಾಗಿ ಕಳೆದ ಒಂದು ವರ್ಷದಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ. ಇನ್ನು ಫೆಬ್ರವರಿ 02ರಂದು ಸಂತ್ರಸ್ಥ ಬಾಲಕಿಯು ಪರಿಯಾಲ್ತಡ್ಕ ಪೇಟೆಗೆ ಹೋಗಿ ಸಾಮಾಗ್ರಿಗಳನ್ನು ತೆಗೆದುಕೊಂಡು ವಾಪಾಸ್ ಬರುತ್ತಿದ್ದ ಸಂದರ್ಭ ಪುಣಚ ಗ್ರಾಮದ ತೋರಣಕಟ್ಟೆ ಎಂಬಲ್ಲಿ ಒಬ್ಬಳೇ ನಿಂತಿರುವಾಗ ಆರೋಪಿ ಬೈಕ್ ನಲ್ಲಿ ಬಂದು ಕಿರುಕುಳ ನೀಡಿದ್ದಾನೆ ಎಂದು ಠಾಣೆಗೆ ದೂರು ನೀಡಲಾಗಿದೆ.
ಅದರಂತೆ ವಿಟ್ಲ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.