ಕುಂದಾಪುರ, ಫೆ 10 : ಬಾವಿಗೆ ಬಿದ್ದ ಚಿರತೆಯೊಂದು ರಕ್ಷಕರ ಎದುರಲ್ಲೇ ಮುಳುಗಿ ಸಾವನ್ನಪ್ಪಿದ ಘಟನೆ ಫೆ 10ರ ಶನಿವಾರ ಮಂದಾರ್ತಿ ಸಮೀಪದ ಶಿರೂರು ಮೂರ್ಕೈನ ಭಂಡಾರ್ತಿಯಲ್ಲಿ ನಡೆದಿದೆ.
ಸುಮಾರು 3 ವರ್ಷ ಪ್ರಾಯದ ಚಿರತೆಯಾಗಿದ್ದು, ನಾಯಿಯನ್ನೋ ಅಥವಾ ಜಿಂಕೆಯನ್ನೋ ಅಟ್ಟಿಸಿಕೊಂಡು ಬಂದಿದ್ದು ಈ ಸಂದರ್ಭ ಆಕಸ್ಮಿಕವಾಗಿ ರಾತ್ರಿ ವೇಳೆ ಬಾವಿಗೆ ಬಿದ್ದಿದೆ. ಬೆಳಿಗ್ಗೆ 5;30 ರ ವೇಳೆ ರಾಮನಾಯ್ಕ ಎನ್ನುವವರು ಬಾವಿಯಿಂದ ಏನೋ ಕೂಗುತ್ತಿರುವುದನ್ನ ಕಂಡು ಬ್ಯಾಟರಿ ಹಿಡಿದು ನೋಡಿದಾಗ ಚಿರತೆ ಬಾವಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಕೆಲವರ ಸಹಾಯದಿಂದ ಅರಣ್ಯ ಇಲಾಖೆಗೆ ಈ ಕುರಿತು ದೂರು ನೀಡಿದ್ದಾರೆ.
7.30 ಕ್ಕೆ ಬಂದ ಅರಣ್ಯ ಇಲಾಖೆ ವೀಕ್ಷಕರು.
ದೂರು ಬಂದ ಸುಮಾರು ಒಂದು ಗಂಟೆ ಬಳಿಕ ಅರಣ್ಯ ವೀಕ್ಷಕರು ಬರಿಗೈನಲ್ಲಿ ಸ್ಥಳಕ್ಕೆ ಬಂದಿದ್ದು, ಇಲ್ಲಿನ ಪರಿಸ್ಥಿತಿಯನ್ನ ಮೇಲಧಿಕಾರಿಗಳಿಗೆ ವರದಿಯೊಪ್ಪಿಸಿದ್ದಾರೆ. ಅವರು ಅಲ್ಲಿಂದ ಬರುವಷ್ಟರಲ್ಲಿ ಚಿರತೆಯ ಸ್ಥಿತಿ ಚಿಂತಾನಜನಕವಾಗಿತ್ತು, ನಂತರ ಇಲಾಖೆ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಬಂದು ರಕ್ಷಿಸುವ ವಿಫಲ ಯತ್ನ ನಡೆಸಿದರು. ಸುಮಾರು 5 ರಿಂದ ಆರು ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಚಿರತೆ ನೀರಿನಲ್ಲಿ ಅರಣ್ಯಾಧಿಕಾರಿಗಳ ಮುಂದೆಯೇ ಮುಳುಗಿ ಸಾವನ್ನಪ್ಪಿದೆ. ನಂತರ ಮುಳುಗು ತಜ್ಞ ಮಂಜುನಾಥ್ ನಾಯ್ಕ್ ಬಂದು ಚಿರತೆಯ ಕಳೇಬರವನ್ನ ಬಾವಿಯಿಂದ ಮೇಲಕ್ಕೆತ್ತಿದ್ದರು. ನಂತರ ಬಿದ್ಕಲ್ಕಟ್ಟೆ ಪಶು ಆರೋಗ್ಯ ಕೇಂದ್ರದಲ್ಲಿ ಚಿರತೆಯ ಶವಪರೀಕ್ಷೆ ನಡೆಸಲಾಯಿತು.
ಸ್ಥಳಕ್ಕೆ ಬಂದ ಅರಣ್ಯ ವೀಕ್ಷಕರು ಅಲ್ಲಿ ಒಂದು ಬಲವಾದ ದೊಣ್ಣೆಯನ್ನ ಚಿರತೆಗೆ ನಿಲ್ಲಲು ಆಧಾರ ನೀಡಿದ್ದರೂ ಕೂಡ ಚಿರತೆಯ ರಕ್ಷಣೆ ಸಾಧ್ಯತೆ ಇತ್ತು ಎಂದು ಸ್ಥಳೀಯರು ಅರಣ್ಯಾಧಿಕಾರಿಗಳ ವಿರುದ್ಧ ಆರೋಪಿಸಿದ್ದಾರೆ. ಬಾವಿಗೆ ಬಿದ್ದ ಚಿರತೆಯ ರಕ್ಷಣೆಗೆ ಬೇಕಾದ ಸಲಕರಣೆಗಳ ಸಿದ್ದತೆ ಮಾಡಿಕೊಂಡಿರದೇ ಯುದ್ದ ಕಾಲೇ ಶಸ್ತ್ರಾಭ್ಯಾಸ ನಡೆಸುವುದು ಎಷ್ಟು ಸರಿ ಎನ್ನುವುದು ಸ್ಥಳೀಯರ ಆರೋಪ.
ಹಲವು ದಿನಗಳಿಂದ ಚಿರತೆ ಓಡಾಟ
ಈ ಭಾಗದಲ್ಲಿ ಜಿಂಕೆ ಸೇರಿದಂತೆ ಇತರ ಕಾಡು ಪ್ರಾಣಿಗಳ ಓಡಾಟ ಜಾಸ್ತಿಯಾದ ಹಿನ್ನೆಲೆ ಚಿರತೆಗಳ ಓಡಾಟ ಕೂಡ ಜಾಸ್ತಿಯಾಗಿದೆ. ಅರಣ್ಯ ಇಲಾಖೆ ಚಿರತೆಗಳ ಬಂಧನಕ್ಕೆ ಕೆಲವು ಕಡೆ ಬೋನುಗಳನ್ನ ಇಟ್ಟಿದ್ದರೂ ಅದೂ ಪ್ರಯೋಜನಕ್ಕೆ ಬಂದಿಲ್ಲ.
ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳಾದ ಸಂತೋಷ್, ಹರೀಶ್, ವೀರಣ್ಣ, ರಾಕೇಶ್ ಮತ್ತು ಸಿಬ್ಬಂದಿಗಳು, ಬಿಲ್ಲಾಡಿ ಗ್ರಾ.ಪಂ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಸ್ಥಳೀಯರು ಭಾಗವಹಿಸಿದ್ದರು.