ಮಂಗಳೂರು, ಫೆ 22 (Daijiworld News/MB) : "ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ, ಎನ್ಆರ್ಪಿ ಕುರಿತಾಗಿ ಕಾಂಗ್ರೆಸ್ ನಿಲುವು ಸ್ಪಷ್ಟವಾಗಿದೆ. ನಾವು ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ನಮ್ಮ ನಿಲುವಿಗೆ ಬೆಂಬಲ ಸೂಚಿಸುವಂತೆ ಮನವರಿಕೆ ಮಾಡುತ್ತೇವೆ" ಎಂದು ಮಹಾರಾಷ್ಟ್ರ ಪಶ್ಚಿಮ ಬಾಂದ್ರಾ ಶಾಸಕ ಜೀಶಾನ್ ಸಿದ್ದೀಕ್ ಹೇಳಿದರು.
ಮಂಗಳೂರಿನಲ್ಲಿ ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಶಿವಸೇನೆಯು ಎನ್ಆರ್ಸಿ ಹಾಗೂ ಎನ್ಪಿಆರ್ನ್ನು ವಿರೋಧ ಮಾಡಿದೆ. ಆದರೆ ಎನ್ಆರ್ಸಿ ಬಗ್ಗೆ ಅವರಿಗೆ ಸ್ಪಷ್ಟನೆಯಿಲ್ಲ. ಅವರಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಾಗಿ ಮನವರಿಕೆ ಮಾಡಿ ಮಹಾರಾಷ್ಟ್ರದಲ್ಲಿ ಸಿಎಎ ಜಾರಿಗೆ ತರದಂತೆ ಒತ್ತಾಯಿಸುತ್ತೇವೆ. ಸಿಎಎ ವಿರೋಧಿ ನಿರ್ಣಯವನ್ನು ನಾವು ಮುಂಬರುವ ಬಜೆಟ್ನಲ್ಲಿ ಅನುಮೋದನೆ ಮಾಡುತ್ತೇವೆ" ಎಂದು ಹೇಳಿದರು.
"ನಾನು ಯುವ ಶಾಸಕ ಹಾಗೂ ಈ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿರುವುದರಿಂದ ಯುವಕರನ್ನು ಸಬಲೀಕರಣ ನನ್ನ ಉದ್ದೇಶ. ಯುವಕರಿಗೆ ಉದ್ಯೋಗ ಸೃಷ್ಟಿಸುವ ವಿಚಾರದಲ್ಲಿ ಮಹಾರಾಷ್ಟ್ರ ಒಂದು ಉದಾಹರಣೆಯಾಗಬೇಕು ಎಂದು ನಾನು ಬಯಸುತ್ತೇನೆ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಹಾಗೂ ಶುದ್ಧ ನೀರಿನ ಪೂರೈಕೆಗೆ ಹೆಚ್ಚಿನ ಗಮನ ನೀಡುತ್ತೇನೆ. ಹಾಗೆಯೇ ನಾವು ಮುಂಬೈ 24x7 ಅನ್ನು ಜಾರಿಗೊಳಿಸಿದ್ದೇವೆ. ಅಲ್ಲಿ ಮೂರು ಪಾಳಿಯಲ್ಲಿ ಕೆಲಸ ಮಾಡಲಾಗುತ್ತದೆ. ಇದರಿಂದಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ. ಆದಿತ್ಯ ಠಾಕ್ರೆ ಹಾಗೂ ನನಗೆ ಉತ್ತಮ ಸಂಬಂಧವಿದೆ. ಮುಂಬೈ 24x7 ಅವರದ್ದೇ ಕಲ್ಪನೆಯಾಗಿದ್ದು ನಾವು ಅದನ್ನು ಕಾರ್ಯಗತಗೊಳಿಸಿದ್ದೇವೆ" ಎಂದು ಅವರು ತಿಳಿಸಿದರು..
ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಅಧ್ಯಕ್ಷ ಹುದ್ದೆಯ ಬಗ್ಗೆ ಕೇಳಿದಾಗ, "ಕಾಂಗ್ರೆಸ್ ಸೋತ ದೆಹಲಿ ಚುನಾವಣಾ ಫಲಿತಾಂಶಗಳನ್ನು ಆತ್ಮಾವಲೋಕನ ಮಾಡುವ ಅವಶ್ಯಕತೆಯಿದೆ. ರಾಹುಲ್ ಗಾಂಧಿಯವರು ಹೆಚ್ಚು ದೃಢವಾಗಿ ಮುನ್ನಡೆಯಬೇಕು ಹಾಗೂ ಪಕ್ಷಕ್ಕೆ ಯಾವುದೂ ಒಳಿತೋ ಅದನ್ನು ಉತ್ತಮವಾಗಿ ನಿಭಾಯಿಸಬೇಕು" ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ನೀರಜ್ ಪಾಲ್, ಟಿ ಕೆ ಸುಧೀರ್, ಸಂತೋಷ್ ಶೆಟ್ಟಿ, ಯು ಕೆ ಮೋನು ಮೊದಲಾದವರು ಉಪಸ್ಥಿತರಿದ್ದರು.