ಪುತ್ತೂರು, ಫೆ 22 (Daijiworld News/MB) : ರಾಷ್ಟ್ರ ದ್ರೋಹದ ಚಟುವಟಿಕೆಗಳ ವಿರುದ್ಧವಾಗಿ ಕಠಿಣ ಕ್ರಮಕೈಗೊಂಡಲ್ಲಿ ರಾಷ್ಟ್ರದ್ರೋಹ ಚಟುವಟಿಕೆಗಳು ಕಡಿಮೆಯಾಗುತ್ತದೆ. ನಕ್ಸಲ್, ಕಮ್ಯೂನಿಷ್ಟ್ ಸಿದ್ಧಾಂತದ ಮೂಲಕ ಹೀಗೆ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತದೆ. ಇದಕ್ಕೆ ಪ್ರೇರಣೆ ನೀಡುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
ಪುತ್ತೂರಿನಲ್ಲಿ ಬಿಜೆಪಿ ಮಂಡಳದ ಪದಾಧಿಕಾರಿಗಳ ಪದಗ್ರಹಣ ನಡೆದ ಬಳಿಕ ಬೆಂಗಳೂರಿನಲ್ಲಿ ಸಿಎಎ, ಎನ್ಆರ್ಸಿ ವಿರೋಧಿ ಪ್ರತಿಭಟನೆಯಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದ ಅಮೂಲ್ಯ ಲಿಯೋನ್ ಕುರಿತು ಮಾತನಾಡಿದ ಅವರು, "ಈ ದೇಶದಲ್ಲೇ ಹುಟ್ಟಿ ಬೆಳೆದು ಇಲ್ಲಿಯ ಗಾಳಿ,ಆಹಾರ ಸ್ವೀಕರಿಸಿ ಈ ದೇಶವನ್ನೇ ವಿರೋಧ ಮಾಡುವುದು ಹಾಗೂ ಈ ದೇಶದಲ್ಲೇ ಇದ್ದು ಬೇರೆ ದೇಶಕ್ಕೆ ಜೈಕಾರ ಹಾಕುವುದು ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದು ರಾಷ್ಟ್ರದ್ರೋಹವಾಗಿದೆ. ಸಂವಿಧಾನದ ಅಡಿಯಲ್ಲಿ ನಾವು ಭಾರತ ಮಾತೆಗೆ ಜಯ ಎಂದು ಹೇಳಬೇಕು ಎಂದು ಹೇಳಿದರು.
ಭಾರತದಲ್ಲೂ ಯಾವ ರಾಜಕೀಯ ಪಕ್ಷವನ್ನೂ ಟೀಕೆ ಮಾಡಬಹುದು, ವಿರೋಧಿಸ ಬಹುದು , ಹೋರಾಟವನ್ನು ಯಾವ ರೀತಿಯಲ್ಲಿಯೂ ಮಾಡಬಹುದು. ಆದರೆ ಈ ದೇಶದಲ್ಲೇ ಇದ್ದು ಭಾರತ ತಾಯಿಯ ಆರಾಧನೆ ಮಾಡದೆಯೇ ಬೇರೆ ದೇಶಕ್ಕೆ ಜೈಕಾರ ಹಾಕುವುದು ರಾಷ್ಟ್ರ ದ್ರೋಹದ ಕಾರ್ಯ. ಆ ನಿಟ್ಟಿನಲ್ಲಿ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಘಟನೆಯ ಹಿಂದೆ ಕಮ್ಯೂನಿಸ್ಟರು, ನಕ್ಸಲ್ಗಳ ವಿಚಾರಧಾರೆಯಿದೆ. ಇದಕ್ಕೆ ಕಾಂಗ್ರೆಸ್ ಪ್ರೇರಣೆಯಾಗಿದೆ. ಇಲ್ಲದಿದ್ದಲ್ಲಿ ಅವರು ವೇದಿಕೆಗೆ ಬರಲು ಹೇಗೆ ಸಾಧ್ಯ. ಕಾಂಗ್ರೆಸ್ ಸಭೆಯಲ್ಲಿ ಬಂದ ಅವರು ಮಾತನಾಡುತ್ತಾರೆ ಎಂದು ಆದಲ್ಲಿ ಸಂಘಟಕರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.