ಬೆಳ್ತಂಗಡಿ, ಫೆ.22 (DaijiworldNews/PY): ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪೊಟ್ಟುಕೆರೆ ಎಂಬಲ್ಲಿ ಅನುಮಾನಾಸ್ಪದವಾಗಿ ಕಂಡ ಮಾರುತಿ 800 ಕಾರನ್ನು ಸಿಪಿಐ ಬೆಳ್ತಂಗಡಿ ಹಾಗೂ ತಂಡ ತಪಾಸಣೆ ಮಾಡುತ್ತಿದ್ದ ಸಂದರ್ಭ ಮೂವರು ಆರೋಪಿಗಳ ಸಹಿತ ಕಾರಿನಲ್ಲಿದ್ದ ಚಿನ್ನ, ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಮುಂಡಾಜೆ ನಿವಾಸಿ ಸತೀಶ ಯಾನೆ ಸ್ಕಾರ್ಪಿಯೋ ಸತೀಶ (33), ಪುತ್ತೂರು ಆರ್ಯಾಪು ನಿವಾಸಿ ಪುಟ್ಟು ರವಿ ಯಾನೆ ಜೀತು (29), ಕುಡುಪು ನಿವಾಸಿ ಹರೀಶ್ ಪೂಜಾರಿ (29) ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಒಟ್ಟು 115 ಗ್ರಾಂ ತೂಕದ ಚಿನ್ನಾಭರಣಗಳು, ಒಟ್ಟು 61 ಗ್ರಾಂ ಬೆಳ್ಳಿಯ ಆಭರಣಗಳು, ಲ್ಯಾಪ್ ಟ್ಯಾಪ್ ಮತ್ತು ಮೊಬೈಲ್ ಹಾಗೂ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ 02 ಸಂಖ್ಯೆಯ ಮೊಟಾರು ಸೈಕಲ್ ಗಳು, 01 ಸಂಖ್ಯೆಯ ಮಾರುತಿ 800 ಕಾರು , 04 ಸಂಖ್ಯೆಯ ಮೊಬೈಲ್ಗಳನ್ನು ವಶಪಡಿಕೊಳ್ಳಲಾಗಿದೆ.
ವಶಪಡಿಸಿಕೊಳ್ಳಲಾದ ವಸ್ತುಗಳ ಒಟ್ಟು ಮೌಲ್ಯ ರೂಪಾಯಿ 5,50,000 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.