ಉಡುಪಿ, ಫೆ.22 (DaijiworldNews/PY): "ನಮ್ಮ ದೇಶದ ದುಡ್ಡು ವಿದೇಶಿ ಪ್ರವಾಸಿ ತಾಣಗಳಿಗೆ ಹರಿಯುತ್ತಿದೆ. ಅದನ್ನು ತಡೆಗಟ್ಟಬೇಕು. ಪ್ರವಾಸಿಗರು ವಿದೇಶಕ್ಕೆ ದುಡ್ಡು ಹರಿದರೆ ನಮ್ಮ ದೇಶಕ್ಕೆ ನಷ್ಟ. ಮಡಿವಂತರಂತೆ ಮಾತನಾಡುವವರು ವಿದೇಶಕ್ಕೆ ತೆರಳಿ ಕ್ಯಾಸಿನೊಗೆ ದುಡ್ಡು ಸುರಿಯುತ್ತಿದ್ದಾರೆ" ಎಂದು ಪ್ರವಾಸೋದ್ಯಮ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ರಾಜ್ಯಕ್ಕೆ ಬರುವ ಪ್ರವಾಸಿಗರು ಗೋವಾ ಹಾಗೂ ಶ್ರೀಲಂಕಾದ ಕ್ಯಾಸಿನೊಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಅವರನ್ನು ಸೆಳೆಯುವ ಉದ್ದೇಶದಿಂದ ರಾಜ್ಯದಲ್ಲಿ ಈ ರೀತಿಯ ಕೆಲವು ನಿರ್ದಿಷ್ಟ ಕೇಂದ್ರ ತೆಗೆಯಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಹೊರಟಿದೆ. ಇಲ್ಲಿ ಮಡಿವಂತರೆಂದು ಪ್ರದರ್ಶಿಸುವವರು ವಿದೇಶಕ್ಕೆ ತೆರಳಿ ದುಡ್ಡು ಸುರಿಯುತ್ತಿದ್ದಾರೆ. ಇದು ಕೇವಲ ಪ್ರವಾಸೋದ್ಯಮ ಇಲಾಖೆ ಯೋಜನೆಯಲ್ಲ. ಇದಕ್ಕೆ ಗೃಹ ಇಲಾಖೆಯಿಂದಲೂ ಅಭಿಪ್ರಾಯ ತೆಗೆದುಕೊಳ್ಳಬೇಕಾಗುತ್ತದೆ" ಎಂದು ತಿಳಿಸಿದರು.
"ರಾಜ್ಯದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಕುರಿತಾಗಿ ಹಲವಾರು ಚರ್ಚೆಯಾಗಿದೆ. ಈ ಸಂದರ್ಭ ಕೃಷಿ ಟೂರಿಸಂ, ವಿಲೇಜ್ ಟೂರಿಸಂ, ರೈನ್ ಟೂರಿಸಂ, ಫುಡ್ ಟೂರಿಸಂ ವಿಚಾರವಾಗಿಯೂ ಕೂಡ ಮಾತನಾಡಲಾಗಿದೆ" ಎಂದರು.
"ನಮ್ಮಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಆದರೂ ಜನರು ಕ್ಯಾಸಿನೊಗಳ ಮೇಲೆ ಆಕರ್ಷಿತರಾಗುತ್ತಿದ್ದಾರೆ. ಕರ್ನಾಟಕದಿಂದಲೂ ಈ ತಾಣಗಳಿಗೆ ಹೋಗುವವರ ಸಂಖ್ಯೆ ಕಡಿಮೆ ಇಲ್ಲ. ಈ ರೀತಿ ವಿದೇಶಕ್ಕೆ ದುಡ್ಡು ಹರಿಸಿದರೆ ನಮ್ಮ ದೇಶಕ್ಕೆ ನಷ್ಟ. ಈ ವಿಚಾರವಾಗಿ ವಾಸ್ತವ ಅಂಶವನ್ನಷ್ಟೆ ಹೇಳಿದ್ದೇನೆ" ಎಂದರು.
"ನಮ್ಮ ಸಂಸ್ಕೃತಿಗೆ ಕ್ಯಾಸಿನೊ ವಿರೋಧವಾಗುತ್ತೆ ನಿಜ. ಹಾಗೆಂದು ನಮ್ಮ ದುಡ್ಡು ವಿದೇಶಕ್ಕೆ ಹರಿಯುತ್ತಿರುವುದೂ ಸತ್ಯ. ವಿದೇಶಕ್ಕೆ ಹೋಗುವವರನ್ನು ತಡೆಯಲಾಗುವುದಿಲ್ಲ. ನಮ್ಮಲ್ಲಿ ಪ್ರವಾಸಿತಾಣ ನಿರ್ಮಿಸುವ ಅಗತ್ಯವಿದ್ದು, ಇದರೊಂದಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶವೂ ನಮ್ಮದಾಗಿದೆ. ಹಾಗಾಗಿ ಸರ್ಕಾರ ಯೋಜನೆ ಸಿದ್ದಪಡಿಸಲು ಮುಂದಾಗಿದೆ" ಎಂದು ಹೇಳಿದರು.