ಮಂಗಳೂರು, ಫೆ 23 (Daijiworld News/MB) : ನಗರದಲ್ಲಿ ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ಫೆ. 25ರಂದು ಜರುಗಲಿರುವ ಪ್ರತಿಭಟನೆಯಲ್ಲಿ ಪ್ರಮುಖ ಭಾಷಣಕಾರಳಾಗಿ ಭಾಗವಹಿಸಬೇಕಿದ್ದ ಅಮೂಲ್ಯ ಲಿಯೋನ ಹೆಸರನ್ನು ಕೈಬಿಡಲಾಗಿದೆ. ಅವಳಿಗಾಗಿ ಈಗಾಗಲೇ ಕಾಯ್ದಿರಿಸಿದ್ದ ವಿಮಾನ ಟಿಕೆಟ್ ಕೂಡ ರದ್ದು ಮಾಡಿಸಲಾಗಿದೆ ಎಂದು ಪ್ರತಿಭಟನೆಯ ಉಸ್ತುವಾರಿ ವಹಿಸಿಕೊಂಡ ಮಾಜಿ ಮೇಯರ್ ಅಶ್ರಫ್ ಅವರು ತಿಳಿಸಿದ್ದಾರೆ.
ಈ ಪ್ರತಿಭಟನೆ ಮಂಗಳೂರಿನ ಕುದ್ರೋಳಿ ಟಿಪ್ಪು ಸುಲ್ತಾನ್ ಗಾರ್ಡನ್ನಲ್ಲಿ ಮುಸ್ಲಿಂ ಐಕ್ಯತಾ ವೇದಿಕೆಯ ನೇತೃತ್ವದಲ್ಲಿ ಜರುಗಲಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾಳನ್ನು ಕಾರ್ಯಕ್ರಮದಿಂದ ಹೊರಗಿಡಲಾಗಿದೆ. ಆಕೆ ಬೆಂಗಳೂರಿನಿಂದ ಮಂಗಳೂರಿಗೆ ಬರಲು ವಿಮಾನದ ಟಿಕೆಟ್ ಕೂಡ ಬುಕ್ ಮಾಡಿದ್ದೆವು ಎಂದು ಅಶ್ರಫ್ ಹೇಳಿದ್ದಾರೆ.
ಅಮೂಲ್ಯ ಪಾಕ್ ಪರ ಘೋಷಣೆ ಕೂಗಿ ದೇಶ ದ್ರೋಹ ಮಾಡಿದ್ದಾಳೆ. ಈ ಹಿನ್ನಲೆಯಲ್ಲಿ ಅಮೂಲ್ಯ ಹೆಸರು ನಮೂದಿಸಿದ ಮುದ್ರಿಸಿದ್ದ ಪ್ರತಿಭಟನೆಯ ಆಮಂತ್ರಣ ಪತ್ರಿಕೆಯನ್ನು ಹಂಚದೆ, ಆಕೆಯ ಹೆಸರು ಇಲ್ಲದ ಹೊಸ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ ಎಂದು ತಿಳಿಸಿದ್ದಾರೆ.