ಕುಂದಾಪುರ, ಫೆ 11 : ವಿವಾಹಿತನೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನ ಒತ್ತಾಯ ಪೂರ್ವಕವಾಗಿ ಮತಾಂತರ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾದ ಘಟನೆ ಗಂಗೊಳ್ಳಿಯಲ್ಲಿ ಫೆ 10 ರ ಶನಿವಾರ ನಡೆದಿದೆ.
ವಲೇರಿಯನ್ ಬುತ್ತೆಲ್ಲೋ ಬಂಧಿತ ಆರೋಪಿಯಾಗಿದ್ದು, ತನ್ನ ಪತ್ನಿಯಾದ ಸೆಲಿನ್ ಬುತ್ತೆಲ್ಲೋರನ್ನ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಾಯಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಹಿನ್ನೆಲೆ
31 ವರ್ಷಗಳ ಹಿಂದೆ ವಲೇರಿಯನ್ ಮತ್ತು ಸೆಲಿನ್ ಗಂಗೊಳ್ಳಿಯ ಚರ್ಚ್ವೊಂದರಲ್ಲಿ ಕೈಸ್ತ ಸಂಪ್ರದಾಯದಂತೆ ವಿವಾಹವಾಗಿ “ಪಿಯಾವಿಲ್ಲಾ” ರಾಮರಾಯ್ ಕೊಡಂಚಾ ರೋಡ್ ಗುಜ್ಜಾಡಿ ಗ್ರಾಮದಲ್ಲಿ ವಾಸವಾಗಿದ್ದರು. ಸುಮಾರು 2 ವರ್ಷಗಳ ವಲೇರಿಯನ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದು, ಬಳಿಕ ಸೆಲಿನ್ ಮತ್ತು ಅವಳ ಇಬ್ಬರು ಮಕ್ಕಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯ ಮಾಡಿದ್ದು, ಒಪ್ಪದಿದ್ದಾಗ ಕ್ರೈಸ್ತ ಧರ್ಮಕ್ಕೆ ಸೇರಿದ ವಿಗ್ರಹ ಮತ್ತು ಪುಸ್ತಕಗಳನ್ನು ನಾಶ ಮಾಡಿದ್ದ. ಹಲವಾರು ಬಾರಿ ಕಟ್ಟಿಗೆಯಿಂದ ಹೊಡೆದು ಚಿತ್ರಹಿಂಸೆ ನೀಡಿ ಮನೆಯಿಂದ ಓಡಿಸಿದ್ದ ಎಂದು ದೂರಿನಲ್ಲಿ ಸೆಲಿನ್ ಹೇಳಿಕೊಂಡಿದ್ದಾಳೆ. ಸೆಲಿನ್ಗೆ ವಿಚ್ಚೇದನವನ್ನೂ ನೀಡದೇ ನಾವುಂದದ ದಿ. ಮೊಯಿದಿನ್ ಸಾಹೇಬರ ಮಗಳು ಫಾತಿಮಾಬಿ ಎಂಬುವವರನ್ನು ವಿವಾಹವಾಗಿ, ಮುಸ್ಲಿಂ ಯುವಕರನ್ನು ಸೆಲಿನ್ ಮನೆಯೊಳಗೆ ನುಗ್ಗಿಸಿ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿಸಿದ್ದಾನೆ. ಇದೇ ಜ. 26 ರಂದು ತನ್ನ ಗಂಡನಿಂದ ತನಗಾದ ನೋವಿನ ವಿಚಾರವನ್ನು ಚರ್ಚ್ ಫಾದರ್ ರವರಿಗೆ ತಿಳಿಸಲು ಗಂಗೊಳ್ಳಿ ಚರ್ಚ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಆರೋಪಿ ವಲೇರಿಯನ್ ವಿ ಬುತ್ತೆಲ್ಲೊ ಸ್ಕೂಟರಿನಲ್ಲಿ ದಿಢೀರನೆ ಬಂದು ಅಡ್ಡಗಟ್ಟಿ ಕುತ್ತಿಗೆ ಹಿಡಿದು ಅವಾಚ್ಯವಾಗಿ ಬೈದು ಮರ್ಯಾದೆಯಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕು ಇಲ್ಲದಿದ್ದರೆ ನಿನ್ನನ್ನು ಮತ್ತು ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸೆಲಿನ್ ಆರೋಪಿಸಿದ್ದಾಳೆ.
ಈ ಹಿಂದೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲು ಆಗ್ರಹಿಸಿ ಈಕೆಯ ಮೇಲೆ ಹಲ್ಲೆ ನಡೆಸಿದ್ದ ಸಂದರ್ಭ, ಭಯದಿಂದ ಮನೆ ಬಿಟ್ಟು ಕುಂದಾಪುರದ ಟಿಟಿ ರೋಡ್ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಇಲ್ಲಿಗೂ ಬಂದು ಹಿಂಸೆ ನೀಡಲು ಆರಂಭಿಸಿದ ಬಳಿಕ ಮಹಿಳಾ ಸಾಂತ್ವಾನ ಕೇಂದ್ರದ ರಾಧಾದಾಸ್ ಸಹಾಯದಿಂದ ಕುಂದಾಪುರ ಠಾಣೆಯಲ್ಲಿ ದೂರು ನೀಡಿದಾಗ ದೂರು ಸ್ವೀಕರಿಸಿಲ್ಲ ಎಂದು ಆರೋಪಿಸಿ ನ್ಯಾಯಾಲಯದ ಮೂಲಕ ದೂರು ಸಲ್ಲಿಸಿ, ಪ್ರಕರಣ ದಾಖಲಿಸಲಾಯಿತು. ನಂತರ ಜಾಮೀನಿನ ಮೂಲಕ ಹೊರಬಂದಿದ್ದ ವಲೇರಿಯನ್. ಈಗ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸೆಲಿನ್ಗೆ ಹಲ್ಲೆ ನಡೆಸಿದ ಕುರಿತು ದೂರು ದಾಖಲಾದ ಹಿನ್ನೆಲೆ, ಆರೋಪಿ ವಲೇರಿಯನ್ನನ್ನ ಬಂಧಿಸಲಾಗಿದೆ.