ಮಂಗಳೂರು, ಫೆ.23 (DaijiworldNews/PY) : ಕೇಂದ್ರದ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಚಿತಾಭಸ್ಮದ ಸ್ಮಾರಕ ಲೋಕಾರ್ಪಣೆಯು ಅವರ ಹುಟ್ಟೂರಾದ ಬಿಜೈ ಚರ್ಚ್ ಆವರಣದಲ್ಲಿ ಭಾನುವಾರ ಬೆಳಗ್ಗೆ ನೆರವೇರಿತು. ಜಾರ್ಜ್ ಫೆರ್ನಾಂಡಿಸ್ರ ಕುಟುಂಬಸ್ಥರ ಸಮ್ಮುಖದಲ್ಲಿ ಮಂಗಳೂರು ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಾಲ್ಡಾನ ಅವರು ಸ್ಮಾರಕ ಲೋಕಾರ್ಪಣೆಗೊಳಿಸಿ, ಆಶೀರ್ವಚನ ನೀಡಿದರು.
ದೀರ್ಘ ಕಾಲದ ಅನಾರೋಗ್ಯದಿಂದಾಗಿ 2019ರ ಜನವರಿ 29ರಂದು 88ನೇ ವಯಸ್ಸಿನಲ್ಲಿ ಜಾರ್ಜ್ ಫೆರ್ನಾಂಡಿಸ್ ನಿಧನರಾಗಿದ್ದರು. ದೆಹಲಿಯಲ್ಲಿ ಅವರ ಅಂತಿಮ ವಿಧಿಗಳನ್ನು ನೆರವೇರಿಸಿದ ಬಳಿಕ ಅವರ ಚಿತಾಭಸ್ಮವನ್ನು ತಂದು ಬಿಜೈ ಚರ್ಚ್ನಲ್ಲಿ ಇರಿಸಲಾಗಿದ್ದು, ಈಗ ಚರ್ಚ್ ವತಿಯಿಂದ ಅದಕ್ಕೆ ಸ್ಮಾರಕ ನಿರ್ಮಿಸಲಾಗಿದೆ.
ಸ್ಮಾರಕ ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಾಲ್ಡಾನ ಅವರು, ಜಾರ್ಜ್ ಫೆರ್ನಾಂಡಿಸ್ ಅವರು ಅಟೋ ಚಾಲಕರೊಂದಿಗೆ ನಿಂತು ಅವರನ್ನು ಒಂದುಗೂಡಿಸಿದರು. ಅವರಿಗೆ ಪದ್ಮ ವಿಭೂಣ ಪ್ರಶಸ್ತಿ ನೀಡಿದಕ್ಕಾಗಿ ನಾವು ಸರ್ಕಾರವನ್ನು ಪ್ರಶಂಸಿಸುತ್ತೇವೆ. ಅವರು ಯಾವಾಗಲೂ ತಮ್ಮ ಕನಸುಗಳನ್ನು ಸಾಧಿಸಲು ಶ್ರಮಿಸುತ್ತಿದ್ದು ಅದನ್ನು ಸಾಕಾರಗೊಳಿಸುತ್ತಿದ್ದರು. ಜನರಿಗಾಗಿ ದುಡಿಯಲು ಹಾಗೂ ಜೀವನದಲ್ಲಿ ಏನಾದರು ಸಾಧನೆ ಮಾಡಲು ಅವರು ಮುಂಬೈಗೆ ತೆರಳಿದ್ದರು ಎಂದು ಹೇಳಿದರು.
ಫೆರ್ನಾಂಡಿಸ್ ಅವರು ಜನರಿಗಾಗಿ ಮಾಡಿದ ಕಾರ್ಯವನ್ನು ನೆನಪಿಸಿಕೊಂಡು ಮಾತನಾಡಿದ ಬಿಷಪ್, ಜಾರ್ಜ್ ಫೆರ್ನಾಂಡಿಸ್ ಅವರು ಪ್ರಜಾಪ್ರಭುತ್ವದ ಶಕ್ತಿಯನ್ನು ಸಾಕಾರಗೊಳಿಸಿದರು. ಅಲ್ಲದೇ, ಕೊಂಕಣ್ ರೈಲ್ವೇ ಯೋಜನೆಯನ್ನು ಪ್ರಾರಂಭಿಸಿದ್ದರು. ಅವರು ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡಿದ್ದರು.ಸಂಪುಟದಲ್ಲಿ ಪ್ರಮುಖ ಸ್ಥಾನ ಪಡೆದಿದ್ದರು. ಅವರು ದ್ವನಿರಹಿತರ ದ್ವನಿಯಾಗಿದ್ದರು, ದುರ್ಬಲರ ಶಕ್ತಿಯಾಗಿದ್ದರು ಎಂದು ಹೇಳಿದರು.
ಜಾರ್ಜ್ ಫರ್ನಾಂಡಿಸ್ ಅವರ ಸಹೋದರ ಮೈಕೆಲ್ ಫರ್ನಾಂಡಿಸ್ ಅವರು ಮಾತನಾಡಿ, ಜಾರ್ಜ್ ಫೆರ್ನಾಂಡಿಸ್ ಅವರ ಸ್ಮಾರಕ ನಿರ್ಮಾಣಕ್ಕಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರು ಒಂದು ಸಹಕಾರಿ ಸಂಘವನ್ನು ರಚಿಸಿದ್ದರು ಅದೀಗ ಬ್ಯಾಂಕ್ ಆಗಿದ್ದು, ಅದು ಸುಮಾರು 2,000 ಕೋ.ಮೌಲ್ಯದ ವಹಿವಾಟು ಹಾಗೂ ಮುಂಬೈನ ಸುತ್ತಮುತ್ತಲಿನಲ್ಲಿ 30ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ಅವರ ನೆನಪಿಗಾಗಿ ಬಿಜೈನಲ್ಲಿ ಒಂದು ಶಾಖೆಯನ್ನು ಸ್ಥಾಪಿಸಬೇಕೆಂಬುದು ನನ್ನ ಕೋರಿಕೆಯಾಗಿದೆ ಎಂದು ತಿಳಿಸಿದರು.
ಜಾರ್ಜ್ ಫರ್ನಾಂಡಿಸ್ ಅವರು ಲೋಕಸಭಾ ಸದಸ್ಯರಾಗಿ ಒಂಬತ್ತು ಬಾರಿ ಹಾಗೂ ಒಂದು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಮಹಾರಾಷ್ಟ್ರದಲ್ಲಿ ಬಾಂಬೆ ಕಾರ್ಮಿಕ ಸಹಕಾರಿ ಬ್ಯಾಂಕ್ ಅನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಫೆರ್ನಾಂಡಿಸ್ ಅವರು ಅಲ್ಜೈಮರ್ ಸಿಂಡ್ರೋಮ್ಗೆ ಬಲಿಯಾದರು ಹಾಗೂ 2019 ರ ಜನವರಿ 29 ರಂದು ತಮ್ಮ 88ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಬಡವರು ಹಾಗೂ ದೀನ ದಲಿತರು, ಕಾರ್ಮಿಕರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹಾಗೂ ಒಬ್ಬ ನುರಿತ ರಾಜಕಾರಣಿಯಾಗಿ ಅವರು ಮಾಡಿದ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮ ವಿಭೂಷಣ ಪ್ರದಾನ ಮಾಡಿದೆ.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ,ಮಾಜಿ ಶಾಸಕ ಜೆ.ಆರ್.ಲೋಬೋ, ಚರ್ಚ್ ಪಾಲನಾ ಮಂಡಳಿಯ ಅಧ್ಯಕ್ಷ ವಿನ್ಸೆಂಟ್ ಡಿಸೋಜ, ಬಿಜೈ ಚರ್ಚ್ನ ಪ್ರಧಾನ ಧರ್ಮಗುರು ವಿಲ್ಸನ್ ವೈಟಸ್ ಡಿಸೋಜ, ಸಹಾಯಕ ಧರ್ಮಗುರು ಪ್ರಮೋದ್ ಕ್ರಾಸ್ತಾ, ಪಾಲನಾ ಮಡಳಿ ಉಪಾಧ್ಯಕ್ಷ ಫ್ರಾನ್ಸಿಸ್ ಅಶೋಕ್ ಪಿಂಟೊ, ಕಾರ್ಯದರ್ಶಿ ಪ್ರೀತಿ ಗೋಮ್ಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ರಾಬಿನ್ ಕುಟಿನ್ಹಾ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ಕಾರ್ಪೊರೇಟರ್ ಲ್ಯಾನ್ಸ್ಲಾಟ್ ಪಿಂಟೊ ಅವರು ಧನ್ಯವಾದ ಸಮರ್ಪಿಸಿದರು ಹಾಗೂ ಬಿಜೈ ಚರ್ಚ್ನ ಪ್ರಧಾನ ಧರ್ಮಗುರು ವಿಲ್ಸನ್ ವೈಟಸ್ ಡಿಸೋಜ ಸ್ವಾಗತಿಸಿದರು.