ಕಾಸರಗೋಡು, ಫೆ 23 (DaijiworldNews/SM): ತನ್ನ ವೇಗದ ಓಟದಿಂದ ವಿಶ್ವಪ್ರಸಿದ್ದಿ ಪಡೆದ ಕಂಬಳದ ಬಂಗಾರದ ಮನುಷ್ಯ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ರವಿವಾರ ಅಂತ್ಯವಾದ ಪೈವಳಿಕೆ ಸಮೀಪದ ಬೋಳಂಗಳ ದಲ್ಲಿ ‘ಅಣ್ಣ-ತಮ್ಮ” ಜೋಡುಕರೆ ಕಂಬಳದಲ್ಲಿ ನಾಲ್ಕು ಪದಕಗಳನ್ನು ಬಾಚಿಕೊಂಡಿದ್ದಾರೆ. ಆ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ನಾಲ್ಕು ವಿಭಾಗದಲ್ಲಿ ತಾನು ಓಡಿಸಿದ ನಾಲ್ಕು ಜೊತೆ ಕೋಣಗಳನ್ನು ಫೈನಲ್ ಗೆ ತಲುಪಿಸಿದ ಶ್ರೀನಿವಾಸ ಗೌಡರು ಎರಡು ಪ್ರಥಮ ಮತ್ತು ಎರಡು ದ್ವಿತೀಯ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಹಗ್ಗ ಕಿರಿಯ ಮತ್ತು ನೆಗಿಲು ಕಿರಿಯ ವಿಭಾಗದಲ್ಲಿ ಚಿನ್ನದ ಪದಕ ಪಡೆದರೆ, ಹಗ್ಗ ಹಿರಿಯ ಮತ್ತು ನೇಗಿಲು ಹಿರಿಯ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಪಡೆದರು. ಇದರೊಂದಿಗೆ ಈ ಋತುವಿನ ಕಂಬಳಗಳಲ್ಲಿ 39 ಪದಕ ಪಡೆದು ಹೊಸ ದಾಖಲೆ ಬರೆದಿದ್ದಾರೆ.
ನೇಗಿಲು ಹಿರಿಯ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದ ಬೋಳದ ಗುತ್ತು ಸತೀಶ್ ಶೆಟ್ಟಿಯವರ “ಕಾಲೆ ಮತ್ತು ಧೋನಿ’’ ಎಂಬ ಹೆಸರಿನ ಕೋಣಗಳು ಫೈನಲ್ ಕದನದಲ್ಲಿ 12.45 ಸೆಕಂಡ್ ನಲ್ಲಿ ಓಡಿ ದಾಖಲೆ ಬರೆದವು. ಇವುಗಳನ್ನು ಓಡಿಸಿದ ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿಯವರು ಈ ಸಾಲಿನ ಅತೀ ವೇಗದ ಓಟಗಾರನೆಂಬ ದಾಖಲೆ ಬರೆದರು.