ಕುಂದಾಪುರ, ಫೆ.24 (DaijiworldNews/PY) : ಆಲೂರು ಗ್ರಾಮದ ಎರಡು ದೇವಸ್ಥಾನಗಳಲ್ಲಿ ಎರಡೇ ದಿನಗಳ ಅಂತರದಲ್ಲಿ ಕಳವು ನಡೆದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಎಎಸ್ಪಿ ಹರಿರಾಂ ಶಂಕರ್, ಕುಂದಾಪುರ ಉಪ ವಿಭಾಗದ ಎಲ್ಲಾ 170 ದೇವಸ್ಥಾನಗಳಲ್ಲಿಯೂ ನಿಗಾ ವಹಿಸಲು ಸೂಚಿಸಿದ್ದಾರೆ.
ಆಲೂರು ಪೇಟೆಯಲ್ಲಿರುವ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಗರ್ಭಗುಡಿಯ ಬೀಗ ಒಡೆದು 1 ಕೆ.ಜಿ ತೂಕದ ಹಳೆಯ ವಿಗ್ರಹ ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ಹಣ ಸಹಿತ ಸುಮಾರು 23 ಸಾ.ರೂ ಮೌಲ್ಯದ ಸೊತ್ತುಗಳನ್ನು ಒಯ್ದಿದ್ದಾರೆ.
ಫೆ.23ರಂದು ಬೆಳಗ್ಗೆ 6.30 ಸುಮಾರಿಗೆ ಅರ್ಚಕ ಮಂಜು ಕುಲಾಲ್ ಅವರು ಪೂಜೆಗೆಂದು ಬಂದಾಗ ಈ ಘಟನೆ ತಿಳಿದುಬಂದಿದೆ. ಫೆ.22ರಂದು ಅವರು ಮಧ್ಯಾಹ್ನ ಪೂಜೆ ಮುಗಿಸಿ, ಬಾಗಿಲು ಹಾಕಿ ತೆರಳಿದ್ದು, ಸಂಜೆ 7 ಗಂಟೆಗೆ ಬಂದು ದೇವಸ್ಥಾನದ ಲೈಟ್ ಹಾಕಿ ಹೋಗಿದ್ದರು.
ಘಟನೆಯ ಬಗ್ಗೆ ಮೊಕ್ತೇಸರ ಅಪ್ಪು ಕುಲಾಲ್ ನೀಡಿರುವ ದೂರಿನನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಎಸ್ಪಿ ಹರಿರಾಂ ಶಂಕರ್, ಬೈಂದೂರು ಸಿಐ ಸುರೇಶ್ ನಾಯ್ಕ್, ಗಂಗೊಳ್ಳಿ ಎಸ್ಐ ಭೀಮಾ ಶಂಕರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಆಲೂರು ಗ್ರಾಮ್ ಹಳ್ಳಿ ಎಂಬಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಫೆ.21ರ ರಾತ್ರಿ ನುಗ್ಗಿದ ಕಳ್ಳರು ದೇವರ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಕಣ್ಣು, ಬಾಯಿ, ಮೂಗು ಹಾಗೂ ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ.
ಎರಡು ದೇವಸ್ಥಾನಗಳು ಕೇವಲ 1.5 ಕಿ.ಮೀ. ಅಂತರದಲ್ಲಿದ್ದು, ಇಲ್ಲಿನ ಮಾಹಿತಿ ತಿಳಿದಿರುವವರೇ ಈ ಕೃತ್ಯ ಎಸಗಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ.