ಮಂಗಳೂರು, ಫೆ.24 (DaijiworldNews/PY) : ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವದ ಅಂಗವಾಗಿ ನೀಡುವ ಅಬ್ಬಕ್ಕ ಪ್ರಶಸ್ತಿಗೆ ಸಾಹಿತಿ, ಕಾದಂಬರಿಗಾರ್ತಿ ಉಷಾ ಪಿ.ರೈ ಹಾಗೂ ರಾಷ್ಟ್ರಿ೦ಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ ಅವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ತಲಾ 25 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದ್ದು, ಮಾ.1ರಂದು ನಡೆಯುವ ಉತ್ಸವದ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಉತ್ಸವದ ಬಗ್ಗೆ ತಿಳಿಸಿದ್ದಾರೆ.
ಫೆ.29 ಹಾಗೂ ಮಾ.1ರಂದು ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ಅಬ್ಬಕ್ಕ ಉತ್ಸವ ನಡೆಯಲಿದೆ. ಫೆ.29ರಂದು ಮಧ್ಯಾಹ್ನ 3.30ಕ್ಕೆ ದೇರಳಕಟ್ಟೆಯಲ್ಲಿ ಅಬ್ಬಕ್ಕ ಉತ್ಸವ ಮೆರವಣಿಗೆ ನಡೆಯಲಿದೆ. ಶಾಸಕ ಯು.ಟಿ ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಹಾಗೂ ಹರೇಕಳ ಹಾಜಬ್ಬ ಆಗಮಿಸಲಿದ್ದಾರೆ.
ಮಾ.1ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, 2 ದಿನಗಳ ಕಾಲ ನಡೆಯುವ ಅಬ್ಬಕ್ಕ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.