ಮಂಗಳೂರು, ಫೆ.24 (DaijiworldNews/PY) : "ಅಧಿಕಾರದ ಅಹಂ, ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಸಂಘಟನಾ ಶಕ್ತಿ ವೈಫಲ್ಯ ಹಾಗೂ ಬೌದ್ಧಿಕ ವಿಚಾರಗಳಿಂದ ಹೊರಗುಳಿದ ಕಾರಣ ಕಾಂಗ್ರೆಸ್ ಈ ಸ್ಥಿತಿಗೆ ಬಂದಿದೆ. ಇಂದು ವಿರೋಧ ಪಕ್ಷವಾಗಲೂ ಕಾಂಗ್ರೆಸ್ ನಾಲಾಯಕ್ ಆಗಿದೆ" ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸೋಮವಾರ ನಗರದ ಪುರಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, "135 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್, ಇಂದು ವಿರೋಧ ಪಕ್ಷವಾಗಲೂ ನಾಲಾಯಕ್ ಆಗಿದೆ" ಎಂದರು.
"ಬೌದ್ಧಿಕ ವಿಚಾರಗಳು, ಭ್ರಷ್ಟಾಚಾರ, ಸಂಘಟನಾ ಶಕ್ತಿ ವೈಫಲ್ಯ, ಅಧಿಕಾರದ ಅಹಂ, ಕುಟುಂಬ ರಾಜಕಾರಣದಿಂದ ಕಾಂಗ್ರೆಸ್ ಹೊರಗಿರುವ ಕಾರಣದಿಂದ ಈ ಸ್ಥಿತಿಗೆ ಬಂದಿದೆ. ಕೆಲವು ಕೂಟ, ನಡೆದಾಟ, ಅಧಿಕಾರದ ಅಹಂಗೆ ಸೀಮಿತವಾಗಿದ್ದು, ಜನರಿಂದ ದೂರ ಉಳಿದಿದೆ. ಈ ಅಂಶಗಳಿಂದ ನಮ್ಮ ಪದಾಧಿಕಾರಿಗಳು ಬಲಿಯಾಗಬಾರದು" ಎಂದು ತಿಳಿಸಿದರು.
"ನೆಹರೂ ಅವರಿಂದ ಮನಮೋಹನ್ ಸಿಂಗ್ ತನಕ ಲಾಲ್ ಬಹದ್ದೂರ್ ಶಾಸ್ತ್ರೀ ಅವರನ್ನು ಹೊರತುಪಡಿಸಿ ಎಲ್ಲಾ ಕಾಂಗ್ರೆಸ್ ಪ್ರಧಾನಿಗಳ ಮೇಲೆಯೂ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಸ್ವಾತಂತ್ರ್ಯದವರೆಗೂ ಮಹಾತ್ಮ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ಅತ್ಯುತ್ತಮವಾಗಿತ್ತು" ಎಂದರು.
"ಮೋದಿ ಪ್ರಭಾವದಿಂದಾಗಿ ಈಚೆಗೆ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಆದರೆ, ಸ್ವಾತಂತ್ರ್ಯ ನಂತರ ಕಾಂಗ್ರೆಸ್, ಇಂದಿರಾ ಕೀ, ರಾಜೀವ್ ಕೀ, ಸೋನಿಯಾ ಕೀ, ರಾಹುಲ್ ಕೀ, ಪ್ರಿಯಾಂಕ ಕೀ ಜೈಕಾರಗಳಿಗೆ ಸೀಮಿತಗೊಂಡಿತು. ದೇಶದ ಧ್ವಜ ಹಿಡಿಯಲು ಒಪ್ಪದ ಹಲವರು ಇಂದು ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆ ನಡೆಸುತ್ತಿದ್ಧಾರೆ. ಇದನ್ನು ನೋಡುವಾಗ ಸಂತೋಷವಾಗುತ್ತದೆ" ಎಂದು ಹೇಳಿದರು.
"ಭಾರತವನ್ನು ವಿಶ್ವ ಜಗದ್ಗುರು ಮಾಡುವುದೇ ಗುರಿ ಎಂದು ಮೋದಿಯವರು ಹೇಳಿದ್ದಾರೆ. ನಾವು ರೋಡು-ತೋಡು ಮಾಡಲು ಬಂದಿಲ್ಲ. ಪಾಕ್ ಪರ ಘೋಷಣೆ ಕೂಗುವವರಿಗೆ ಕಮ್ಯುನಿಸ್ಟರು ಮಾತ್ರವಲ್ಲ, ಕಾಂಗ್ರೆಸಿಗರೂ ಪ್ರೇರಣೆ ನೀಡುತ್ತಿದ್ದಾರೆ" ಎಂದರು.
"ಪಕ್ಷದ ಹುದ್ದೆಗಳಿರುವುದು ಅಧಿಕಾರಕ್ಕೆ ಅಥವಾ ವಿಸಿಟಿಂಗ್ ಕಾರ್ಡ್ಗೆ ಅಲ್ಲ. ಅದು ಜವಾಬ್ದಾರಿಯಾಗಿದೆ. ನಿಮ್ಮ ಹುದ್ದೆಯು ಹೆಗಲ ಮೇಲಿನ ಭಾರದಂತಿರಬೇಕೇ ಹೊರತು ಅದನ್ನು ತಲೆಗೇರಿಸಿಕೊಂಡು ದಾರಿ ತಪ್ಪಬಾರದು. ಶೆ.80ರಷ್ಟು ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಣತೊಡಿ" ಎಂದು ತಿಳಿಸಿದರು.
"ನಿರ್ಗಮಿತ ಅಧ್ಯಕ್ಷ ಸಂಜೀವ ಮಠಂದೂರು ಅವರು ಮಾತನಾಡಿ, ನನ್ನ ಅವಧಿಯಲ್ಲಿ 8ರಲ್ಲಿ 7 ಶಾಸಕರು, 10ರಲ್ಲಿ 9 ಸ್ಥಳೀಯ ಸಂಸ್ಥೆಗಳು, ಮಂಗಳೂರು ಮಹಾನಗರ ಪಾಲಿಕೆಯನ್ನು ಜಯಿಸಿರುವುದು ಸಂತೋಷದ ವಿಷಯ. ಇದಕ್ಕೆ ಎಲ್ಲರ ಸಂಘಟಿತ ಪ್ರಯತ್ನ ಕಾರಣ" ಎಂದರು.
"ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂಬುದೇ ನಮ್ಮ ನಿಲುವಾಗಿದೆ. ರಾಜಕಾರಣವೊಂದು ವೃತ್ತಿಯಾಗದೇ ವ್ರತವಾಗಬೇಕು. ಪಕ್ಷದ ಅಧ್ಯಕ್ಷರು ಸಚಿವನಿಗಿಂತಲೂ ದೊಡ್ಡವರು" ಎಂದರು.
ಈ ಸಂದರ್ಭ ಶಾಸಕರಾದ ಅಂಗಾರ, ಉಮನಾಥ ಕೋಟ್ಯಾನ್, ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಮುಖಂಡರಾದ ಉದಯಕುಮಾರ್ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.