ಮಂಗಳೂರು, ಫೆ.24 (DaijiworldNews/PY) : ಮಗ ಕೋಮಾ ಸ್ಥಿತಿಯಲ್ಲಿದ್ದಾನೆ ಎಂಬ ಸುದ್ದಿ ತಿಳಿದು ತಾಯಿ ಮೃತಪಟ್ಟ ಕೆಲವೇ ನಿಮಿಷಗಳ ಬಳಿಕ ಮಗನೂ ಮೃತಪಟ್ಟ ಘಟನೆ ಫೆ.23 ಭಾನುವಾರ ಕಾಪ್ರಿಗುಡ್ಡದಲ್ಲಿ ನಡೆದಿದೆ.
ಕಾಪ್ರಿಗುಡ್ಡದ ದಿ.ಬಾಜಿಲ್ ಡಿಸೋಜಾ ಅವರ ಪತ್ನಿ ಜೂಲಿಯಾನ ಡಿಸೋಜಾ (84) ಅವರ ಮಗ ನೋಬರ್ಟ್ ಡಿಸೋಜಾ (58) ಚಿಕಿತ್ಸೆಗೆ ಸ್ಪಂದಿಸದೇ ಕೋಮಾ ಸ್ಥಿತಿಯಲ್ಲಿದ್ದರು. ಈ ಸುದ್ದಿ ತಿಳಿದ ಜೂಲಿಯಾನ ಡಿಸೋಜಾ ಅವರು ಆಘಾತದಿಂದ ಮೃತಪಟ್ಟಿದ್ದಾರೆ.
ಕೆಲವು ತಿಂಗಳ ಹಿಂದೆ ನಾರ್ಬರ್ಟ್ ಡಿಸೋಜಾ ಅವರು ಕೆಳಗೆ ಬಿದ್ದು ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 15 ದಿನಗಳ ಹಿಂದೆ ಅವರ ತಲೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅದರಿಂದ ಅವರು ಚೇತರಿಸಿಕೊಳ್ಳಲಾಗದೇ ಕೋಮಾ ಸ್ಥಿತಿಗೆ ಹೋಗಿದ್ದರು.
ತನ್ನ ಮಗ ನೋಬರ್ಟ್ನ ಆಘಾತಕಾರಿ ಸುದ್ದಿಯನ್ನು ಕೇಳಿದ ತಾಯಿ ಜೂಲಿಯನ್ ಡಿ ಸೋಜಾ ಅವರು ಮೃತಪಟ್ಟಿದ್ದು, ತಾಯಿಯ ಮೃತ್ಯುವಿನ ಬೆನ್ನಲ್ಲೇ ನಿಮಿಷಗಳ ಅಂತರದಲ್ಲಿ ಪುತ್ರ ಇಹಲೋಕ ತ್ಯಜಿಸಿದ್ದಾರೆ.