ಮಂಗಳೂರು, ಫೆ 24 (DaijiworldNews/SM): ಬಸ್ ಚಾಲಕರು, ನಿರ್ವಾಹಕರು ಎಂದಾಕ್ಷಣ ಮೂಗು ಮುರಿದುಕೊಳ್ಳುವವರೇ ಹೆಚ್ಚು. ಬಹುತೇಕ ಸಿಬ್ಬಂದಿಗಳು ಪ್ರತಿನಿತ್ಯ ಗರಂ ಆಗಿರುತ್ತಾರೆ. ಆದರೆ, ಅವರ ಮಧ್ಯೆ ಕೂಡ ಮಾನವೀಯತೆಯನ್ನೊಳಗೊಂಡ ಅನೇಕರು ಇದ್ದಾರೆ ಎನ್ನುವುದುದಕ್ಕೆ ಈ ಘಟನೆಯೇ ಸಾಕ್ಷಿ.
ತಲಪಾಡಿಯ ಕಿನ್ಯಾದಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸ್ಪಂದಿಸಿದ ಬಸ್ ಚಾಲಕರು ಮಹಿಳೆಯ ಪ್ರಾಣ ರಕ್ಷಿಸಿದ್ದಾರೆ.
ಬಸ್ ಪ್ರಯಾಣದ ವೇಳೆ ಮಹಿಳೆಗೆ ಎದೆ ನೋವು ಕಾಣಿಸಿಕೊಂಡಿದೆ. ಇದರಿಂದ ಎಚ್ಚೆತ್ತುಕೊಂಡ ಬಸ್ ಚಾಲಕ ಹಾಗೂ ನಿರ್ವಾಹಕರು ಬಸ್ಸನ್ನು ಯಾವುದೇ ನಿಲ್ದಾಣಗಳಲ್ಲೂ ನಿಲ್ಲಿಸದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಹಾಗೂ ಮಹಿಳೆಗೆ ಜೀವದಾನ ಮಾಡಿದ್ದಾರೆ.
ಕರಾವಳಿ ಶ್ರಮಿಕ ಸಂಘ ಖಾಸಗಿ ಬಸ್ ಚಾಲಕರ ಹಾಗೂ ನಿರ್ವಾಹಕರ ಸಂಘದ ಸದಸ್ಯರು ಹಾಗೂ ಮಹೇಶ್ ಬಸ್ಸಿನ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ ಪ್ರಮೋದ್ ಹಾಗೂ ನಿರ್ವಾಹಕ ಅಶ್ವಿತ್ ಎಂಬವರ ಮಾನವೀಯತೆಗೆ ಇದೀಗ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ಬಸ್ ಸಿಬ್ಬಂದಿಯನ್ನು ಕಂಡಾಗ ಮೂಗು ಮುರಿಯುವವರಿಗೆ ಅವರೊಳಗಿನ ಮಾನವೀಯ ಮೌಲ್ಯಗಳನ್ನು ಪ್ರಮೋದ್ ಹಾಗೂ ಅಶ್ವಿತ್ ಪರಿಚಯಿಸಿಕೊಟ್ಟಿದ್ದಾರೆ.
ಘಟನೆ ವಿವರ:
ಬೆಳಿಗ್ಗೆ 10.30ಕ್ಕೆ ಕಿನ್ಯಾದಿಂದ ತೆರಳುವ ಬಸ್ಸಿನಲ್ಲಿ ಮೀನಾದಿ ನಿವಾಸಿ ಭಾಗ್ಯ(50) ಎಂಬ ಮಹಿಳೆ, ಇನ್ನೋರ್ವ ಮಹಿಳೆ ಜೊತೆಗೆ ಬಸ್ಸನ್ನೇರಿದ್ದರು. ಸೀಟಿನಲ್ಲಿ ಕುಳಿತಿದ್ದ ಭಾಗ್ಯ ಅವರು ಬಸ್ಸು ಕೆ.ಸಿ ರೋಡು ತಲುಪುತ್ತಿದ್ದಂತೆ ಎದೆನೋವು ಎಂದು ಬೊಬ್ಬೆ ಹಾಕಲು ಆರಂಭಿಸಿದರು. ಇದನ್ನು ಗಮನಿಸಿದ ಸಿಬ್ಬಂದಿ ಬಸ್ಸಿನಲ್ಲಿ ಪ್ರಯಾಣಿಕರಿದ್ದರೂ, ಎಲ್ಲಿಯೂ ನಿಲ್ಲಿಸದೆ ಸುಮಾರು 3 ಕಿ.ಮೀ ಉದ್ದಕ್ಕೆ ಬಸ್ಸು ಚಲಾಯಿಸಿ ಕೋಟೆಕಾರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಭಾಗ್ಯ ಅವರು ಜತೆಗಿದ್ದ ಮಹಿಳೆ ಜೊತೆಗೆ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಹೊರರೋಗಿಯಾಗಿ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವುದಾಗಿ ಮಹೇಶ್ ಬಸ್ಸು ಕಂಪೆನಿ ಪ್ರಬಂಧಕ ರಂಜಿತ್ ತಿಳಿಸಿದ್ದಾರೆ. ಶ್ರಮಿಕ ಸಂಘದ ಸದಸ್ಯರಾಗಿರುವ ಚಾಲಕ ಹಾಗೂ ನಿರ್ವಾಹಕರ ಸಮಯಪ್ರಜ್ಞೆ ಹಾಗೂ ಮಾನವೀಯತೆಯ ಗುಣಗಳನ್ನು ಸಂಘ ಹಾಗೂ ಬಸ್ಸು ಮಾಲೀಕ ಪ್ರಕಾಶ್ ಶೇಖ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.