ಮಂಗಳೂರು, ಫೆ 24 (DaijiworldNews/SM): ಅತ್ತೆಯನ್ನು ಕಿಡ್ನಾಪ್ ಮಾಡಿ ಅವರ ತಲೆ ಬೋಳಿಸಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ತಮಿಳುನಾಡು ಮೂಲದ ಕಲಾವತಿ ಎಂಬವರನ್ನು ಆಕೆಯ ಅಳಿಯ ಚಂದ್ರಶೇಖರ್ 15 ದಿನಗಳ ಹಿಂದೆ ಕಿಡ್ನಾಪ್ ಮಾಡಿದ್ದ.
13 ದಿನ ತಮಿಳುನಾಡಿನ ತಿರುಪ್ಪುರದಲ್ಲಿ ಅವರನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡುತ್ತಿದ್ದ. ನಂತರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಪಾಲಕ್ಕಾಡ್ ನಲ್ಲಿ ರೈಲು ಹತ್ತಿಸಿ ಬಿಟ್ಟಿದ್ದ. ತಿರುಪ್ಪುರ ಪ್ರಯಾಣವೆಂದು ಹೇಳಿ ಆಕೆಯನ್ನು ಅವರ ಅಳಿಯ ಮಂಗಳೂರು ರೈಲು ಹತ್ತಿಸಿ ಬಿಟ್ಟಿದ್ದ.
ಹೀಗೆ ರೈಲನ್ನೇರಿದ್ದ ಕಲಾವತಿ ಫೆ. 22ರಂದು ಮಂಗಳೂರಿಗೆ ಬಂದು ಇಳಿದಿದ್ದರು. ಬಳಿಕ 2 ದಿನ ರೈಲ್ವೇ ನಿಲ್ದಾಣದಲ್ಲಿ65ರ ಹರೆಯದ ವೃದ್ಧೆ ಉಪವಾಸವಿದ್ದರು. ಬಳಿಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವಿನಿಂದ ಮಂಗಳೂರಿನಲ್ಲಿರುವ ಕೋರ್ಟ್ ಸಂಕೀರ್ಣಕ್ಕೆ ಬಂದಿದ್ದರು.
ಚಂದ್ರಶೇಖರ್ ಹಾಗೂ ಪತ್ನಿಯ ವ್ಯಾಜ್ಯಗಳ ಕೋರ್ಟ್ ನಲ್ಲಿದ್ದ ಹಿನ್ನಲೆಯಲ್ಲಿ ಆರೋಪಿ ಅಳಿಯ ಕಿಡ್ನಾಪ್ ನಡೆಸಿದ್ದ ಎಂದು ತಿಳಿದುಬಂದಿದೆ. ಗೂಂಡಾಗಳೊಂದಿಗೆ ಸೇರಿಕೊಂಡು ಕಿಡ್ನಾಪ್ ಮಾಡಿದ್ದಾನೆ ಎಂಬುವುದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಲಾಗಿದೆ.