ಉಡುಪಿ, ಫೆ 24 (DaijiworldNews/SM): ಮಾಜಿ ಸಿಎಂ ಸಿದ್ದರಾಮಯ್ಯನವರು ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಪಾಠ ಹೇಳಬೇಕಿಲ್ಲ. ಸಿದ್ದರಾಮಯ್ಯರನ್ನು ಯಾರೂ ಕೇಳೋರಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಖರ್ಗೆ, ಬಿಜೆಪಿ ನಾಯಕರ ವಿರುದ್ಧ ಆರೋಪ, ಹಗುರ ಮಾತುಗಳ ಮೂಲಕ ಕೀಳು ರಾಜಕೀಯದಲ್ಲಿ ತೊಡಗಿದ್ದಾರೆ. ಜಗತ್ತಿನ ಶಕ್ತಿಶಾಲಿ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಅಮೆರಿಕ, ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಗಬೇಕು. ಪಾಕ್ ಭಯೋತ್ಪಾದಕತೆ ವಿರುದ್ಧ ಟ್ರಂಪ್ ಎಚ್ಚರಿಕೆ ನೀಡಿದ್ದು ಭಯೋತ್ಪಾದನೆ ನಿಯಂತ್ರಣಕ್ಕೆ ಬರಬೇಕು ಎಂದು ಹೇಳಿದ್ದಾರೆ.
370ನೇ ವಿಧಿ ರದ್ದು, ತ್ರಿವಳಿ ತಲಾಖ್ ರದ್ದು, ರಾಮಮಂದಿರ ನಿರ್ಮಾಣ ನಿರ್ಧಾರ ಸಹಿತ ಗಡಿ ಸುಭದ್ರಗೊಳಿಸಿ ಪಾಕ್, ಚೀನಾಕ್ಕೆ ಪ್ರತ್ಯುತ್ತರವನ್ನು ಭಾರತ ನೀಡಿದೆ. ಬಿಜೆಪಿ ಸರಕಾರ ಅಭಿವೃದ್ಧಿ ಪರವಾಗಿದ್ದು ಕಾಂಗ್ರೆಸ್ ಟೀಕೆಯಿಂದ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.