ವಿಟ್ಲ, ಫೆ 24 (DaijiworldNews/SM): ಲಾರಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕಾಗಿ ಸಾಗಾಟ ಮಾಡಲು ಹೊಂಚುಹಾಕುತ್ತಿದ್ದ ಆರೋಪಿ ಸಹಿತ ಲಾರಿಯನ್ನು ವಶಕ್ಕೆ ಪಡೆದುಕೊಂಡ ಪ್ರಕರಣ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಳಿಕೆ ಗ್ರಾಮದ ಕಾಂತಡ್ಕ ನಿವಾಸಿ ಹಾರೀಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 1.465 ಕೆ.ಜಿ.ಗಾಂಜಾ, 6 ಲಕ್ಷ ಮೌಲ್ಯದ ಲಾರಿ ಹಾಗೂ 2000 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಪೋನ್ ವಶಕ್ಕೆ ಪಡೆದುಕೊಂಡಿದ್ದಾರೆ.
ಅಳಿಕೆ ಗ್ರಾಮದ ಕಾಂತಡ್ಕ ನಿವಾಸಿ ಹಸೈನಾರ್ ಅವರ ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಲಾರಿಯ ಕ್ಯಾಬಿನ್ ನ ಒಳಗಡೆ ಸೀಟಿನ ಅಡಿಯಲ್ಲಿ ಕೈ ಚೀಲದಲ್ಲಿ ಗಾಂಜಾ ಪತ್ತೆಯಾಗಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಲಾರಿಯ ಸೀಟಿನಲ್ಲಿ ಸಾಗಾಟಕ್ಕೆ ತೆರಳಲು ಸಿದ್ದನಾಗಿದ್ದ ಚಾಲಕ ಆರೋಪಿಯನ್ನು ಪೊಲೀಸರನ್ನು ನೋಡಿ ಓಡಲಾರಂಭಿಸಿದ್ದಾನೆ ಎಂದು ತಿಳಿದುಬಂದಿದೆ.
ಈತನ ಬೆನ್ನಟ್ಟಿ ಹಿಡಿದು ಲಾರಿಯನ್ನು ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ಗಾಂಜಾ ಪತ್ತೆಯಾಗಿದೆ. ಈತ ಕೇರಳ ಕಡೆಯಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿ ಮಾಡಿ ಕರ್ನಾಟಕಕ್ಕೆ ಮಾರಾಟ ಮಾಡಲು ತಂದಿರುವುದಾಗಿ ಪ್ರಾಥಮಿಕ ವಿಚಾರಣೆ ವೇಳೆ ತಿಳಿಸಿದ್ದಾನೆ.
ಬಂಟ್ವಾಳ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.