ಕುಂದಾಪುರ, ಫೆ 24 (DaijiworldNews/SM): ತಾಲೂಕಿನಲ್ಲಿ ಕಳೆದ ಹದಿನೆಂಟು ತಿಂಗಳುಗಳಿಂದ ಬಿಡುಗಡೆಯಾಗದೇ ಇರುವ ವಿವಿಧ ವಸತಿ ಯೋಜನೆಗಳ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಆಗ್ರಹಿಸಿದೆ.
ಈ ಬಗ್ಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮನವಿ ಮಾಡಿದ್ದು, ಕುಂದಾಪುರ ತಾಲೂಕಿನಲ್ಲಿ ಎರಡು ವರ್ಷಗಳ ಹಿಂದೆ ಐನೂರ ಎಪ್ಪತ್ತೊಂದು ಬಸವ ವಸತಿ ಯೋಜನೆಗೆ 1 ಕೋಟಿ 87 ಲಕ್ಷದ 63 ಸಾವಿರದ ಆರುನೂರಾ ತೊಂಭತ್ತೊಂದು ರೂಪಾಯಿ ಹಾಗೂ ಅಂಬೇಡ್ಕರ್ ನಿವಾಸ ಯೋಜನೆಯಡಿಯಲ್ಲಿ 87 ಮನೆಗಳಿಗೆ ೩35ಲಕ್ಷದ 20ಸಾವಿರದ ನಾನೂರ ಐವತ್ತೆಂಟು ರೂಪಾಯಿಗಳು ಸೇರಿ ಒಟ್ಟು 2ಕೋಟಿ 22ಲಕ್ಷದ 84ಸಾವಿರದ ನೂರಾನಲ್ವತ್ತೊಂಭತ್ತು ರೂಪಾಯಿಗಳನ್ನು ಮಂಜೂರು ಮಾಡಲಾಗಿತ್ತು.
ಫಲಾನುಭವಿಗಳು ಯೋಜನೆ ಅನುಷ್ಟಾನದ ನಂಬಿಕೆಯಿಂದ ಮನೆ ನಿರ್ಮಾಣಕ್ಕೂ ಮುಂದಾಗಿದ್ದರು. ಮನೆಗೆ ಪಂಚಾಂಗ ಹಾಗೂ ಸ್ಲ್ಯಾಬ್ ಮಾಡಲು ಕಾಮಗಾರಿ ಆರಂಭಿಸಿ ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿ ಎದುರಾಗಿದ್ದು, ಕಳೆದ ಹದಿನೆಂಟು ತಿಂಗಳುಗಳಿಂದ ಅನುದಾನ ಬಂದಿಲ್ಲ. ಇದರಿಂದಾಗಿ ಸಹಾಯಧನದ ನಿರೀಕ್ಷೆಯಲ್ಲಿದ್ದ ಫಲಾನುಭವಿಗಳು ಮನೆ ನಿರ್ಮಾಣ ಮಾಡಲಾಗದೆ ಕಂಗಾಲಾಗಿದ್ದಾರೆ. ಸ್ಥಳೀಯ ಚುನಾವಣೆಗಳು ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಚುನಾವಣೆ ಎದುರಿಸುವುದೂ ಕಷ್ಟವಾಗಲಿದೆ. ಆದ್ದರಿಂದ ತಕ್ಷಣ ಅನುದಾನ ಮಂಜೂರು ಮಾಡುವಂತೆ ಆಗ್ರಹಿಸಿದ್ದಾರೆ.