ಬಂಟ್ವಾಳ, ಫೆ.25 (DaijiworldNews/PY) : ಮೆಹಂದಿ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ಮಧ್ಯ ರಾತ್ರಿ ಪುಂಜಾಲಕಟ್ಟೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಂಡಕ್ಕೆ ಬಿದ್ದ ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ತೆಂಕಕಜೆಕಾರು ಕಾರ್ಲ ನಿವಾಸಿ ಇಂದಿರಾ (55) ಮೃತ ಮಹಿಳೆ.
ವೇಣೂರು ಕಾಶಿಪಟ್ನದಲ್ಲಿ ಇಂದಿರಾ ಅವರ ಮಗಳ ಮನೆಯಲ್ಲಿ ನಡೆಯುವ ಮದರಂಗಿ ಶಾಸ್ತ್ರದಲ್ಲಿ ಭಾಗಿಯಾಗಿ ವಾಪಾಸಾಗುವ ವೇಳೆ ಪುಂಜಾಲಕಟ್ಟೆ ದೈಕಿನಕಟ್ಟೆ ತಿರುವಿನಲ್ಲಿ ಈ ಘಟನೆ ನಡೆದಿದೆ.
ಇಂದಿರಾ ಅವರು ಪತಿ ನಿವೃತ್ತ ಸೈನಿಕ ಸದಾನಂದ ಅವರ ಜೊತೆ ಸ್ವಿಫ್ಟ್ ಕಾರಿನಲ್ಲಿ ಕಾಶಿಪಟ್ನದಿಂದ ಮಧ್ಯರಾತ್ರಿ ಬರುವ ವೇಳೆ ಸದಾನಂದ ಅವರು ಕಾರು ಚಲಾಯಿಸುತ್ತಿದ್ದು ನಿಯಂತ್ರಣ ತಪ್ಪಿ ಕಾರು ಹೊಂಡಕ್ಕೆ ಬಿದ್ದಿದೆ. ಕಾರು ಬಿದ್ದ ಶಬ್ದ ಕೇಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದ ಇಬ್ಬರನ್ನು ಹೊರಕ್ಕೆ ತೆಗೆದು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರಾದರೂ ಗಂಭೀರ ಗಾಯಗೊಂಡಿದ್ದ ಇಂದಿರಾ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಅಲ್ಪಸ್ವಲ್ಪ ಪ್ರಮಾಣದಲ್ಲಿ ಗಾಯಗಳಾಗಿರುವ ಸದಾನಂದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಪುಂಜಾಲಕಟ್ಟೆ ಎಸ್.ಐ.ಸೌಮ್ಯ ಅವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.