ಕಾರ್ಕಳ, ಫೆ 25 (DaijiworldNews/SM): ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಅಧಿಕಾರ ನಡೆಸುತ್ತಿರುವ ಬಿಜೆಪಿಯನ್ನು ಬೌಧಿಕ ದಿವಾಳಿತನ ಕಾಡುತ್ತಿದೆ. ಆದ್ದರಿಂದಲೇ ಸಂಸದ ನಳಿನ್ ಕುಮಾರ್ ಕಟೀಲ್ ರಂತಹ ಒಬ್ಬ ಅಪ್ರಬುದ್ಧ ಮನಸ್ಥಿತಿಯ ಮನುಷ್ಯ ಈ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಾಗುವಂತಾಗಿದೆ ಎಂದು ಕಾರ್ಕಳ ಕಾಂಗ್ರೆಸ್ ವಕ್ತಾರ ನಕ್ರೆ ಬಿಪಿನಚಂದ್ರ ಪಾಲ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಸಾಧನೆಯ ಬಗ್ಗೆ ಭವಿಷ್ಯ ನುಡಿಯುವ ಮೊದಲು ತನ್ನ ಪಕ್ಷದ ಜಾತಕವನ್ನೊಮ್ಮೆ ಅವಲೋಕನ ಮಾಡಲಿ. ಕಳೆದ 8 ವರ್ಷಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಹೊರತು ಪಡಿಸಿ, ಮತ್ತೆಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ಸೇರಿ, ದೇಶದಲ್ಲಿ ನಡೆದ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಕೇವಲ 11 ರಾಜ್ಯಗಳಲ್ಲಿ ಮಾತ್ರ ಸ್ವತಂತ್ರವಾಗಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ್, ಛತ್ತೀಸಗಡಗಳಲ್ಲಿ ಸೋತು ಸುಣ್ಣವಾಗಿ ಅಧಿಕಾರ ಕಳೆದುಕೊಂಡಿದೆ. ಬಹುಶ: ಬಿಜೆಪಿಯ ಈ ದಯನೀಯ ಸ್ಥಿತಿಯ ಬಗ್ಗೆ ಕರ್ನಾಟಕದ ರಾಜ್ಯಾಧ್ಯಕ್ಷರಿಗೆ ಮಾಹಿತಿಯ ಕೊರತೆ ಇದೆ ಎಂದು ಕಾಣಿಸುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರು ಅನ್ಯರ ಮನೆಯ ನೊಣ ಓಡಿಸುವ ಮೊದಲು ತನ್ನ ಮನೆಯ ನೊಣ ಓಡಿಸುವ ಕೆಲಸ ಮಾಡಲಿ. ರಾಜ್ಯದಲ್ಲಿ ಜನಪರವಾಗಿ ಕೆಲಸ ಮಾಡುತ್ತಿದ್ದ, ಕಾಂಗ್ರೆಸ್ ಜೆಡಿಎಸ್ ಸಂಮಿಶ್ರ ಸರಕಾರವನ್ನು ಕೆಡವಿ ಹಾಕಿ, ಅಪರದಾರಿಯಲ್ಲಿ ಅಧಿಕಾರಕ್ಕೆ ಬಂದ ದುರಂತಗಾಥೆ ಗ್ರಾಮೀಣ ಪ್ರದೇಶಗಳಲ್ಲಿ ಜನಪದಗೀತೆಯಾಗಿ ನಾಡಿನ ಜನರನ್ನು ರಂಜಿಸಿದೆ. ಆ ನೆಲೆಯಲ್ಲಿ ಮುಂದಿನ ಪಂಚಾಯತ್ ಚುನಾವಣೆಯಲ್ಲಿ ನಾವೇ ಗೆದ್ದು ಬರುತ್ತೇವೆ ಎನ್ನುವ ಅಹಂಭಾವ ಬೇಡ ಎಂದು ಅವರು ಹೇಳಿದ್ದಾರೆ.